ಮಂಡ್ಯ: ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಯಾಗುತ್ತಿದ್ದಂತೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಟಿಕೆಟ್ ನಿಂದ ವಂಚಿತರಾಗಿದ್ದರು. ಹೀಗಾಗಿ ಅವರು ರಾಜಕಾರಣದಿಂದಲೇ ಹಿಂದೆ ಸರಿದರು ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದರು. ಈ ಮಧ್ಯೆ ಸುಮಲತಾ ಅವರು ಮಾತನಾಡಿದ್ದು, ಮಂಡ್ಯದಲ್ಲೇ ನನ್ನ ರಾಜಕಾರಣ ಎಂದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೆಲವು ತಿಂಗಳು ವಿಶ್ರಾಂತಿ ಪಡೆದಿದ್ದೇನೆ. ಮಂಡ್ಯದಲ್ಲೇ ನನ್ನ ರಾಜಕಾರಣ ಮಾಡುತ್ತೇನೆ. ಹೊಸ ವರ್ಷದಿಂದ ಮತ್ತೆ ಪಕ್ಷ ಸಂಘಟನೆ ಮಾಡುತ್ತೇನೆ. ಈ ವೇಳೆ ಮಂಡ್ಯದ ತುಂಬಾ ಓಡಾಡಿ, ಪಕ್ಷ ಸಂಘಟನೆ ಮಾಡುತ್ತೇನೆ ಎಂದಿದ್ದಾರೆ.
ಐದು ವರ್ಷಗಳಲ್ಲಿ ನಾನು ಸಾಕಷ್ಟು ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಬೆಲೆ ನೀಡಿ, ಕ್ಷೇತ್ರ ತ್ಯಾಗ ಮಾಡಿದೆ. ಜನವರಿಯಿಂದ ಸಕ್ರೀಯವಾಗಿ ಮಂಡ್ಯದಲ್ಲಿ ಓಡಾಡುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರು ನನ್ನನ್ನು ಚುನಾವಣಾ ಪ್ರಚಾರಕ್ಕೆ ಕರೆಯದಿರುವ ಕುರಿತು ಅಷ್ಟಾಗಿ ನಾನು ಗಮನ ಕೊಟ್ಟಿಲ್ಲ. ನನ್ನ ಅಗತ್ಯ ಎಲ್ಲಿದೆ ಅಂತಾ ಅನಿಸುತ್ತೆ ಅಲ್ಲಿಗೆ ಕರೆಯುತ್ತಾರೆ. ಪಕ್ಷದಿಂದ ಸೂಚನೆ ಬಂದರೆ ಪ್ರಚಾರಕ್ಕೆ ಹೋಗುತ್ತೇನೆ ಎಂದಿದ್ದಾರೆ.