ಕೇಂದ್ರ ಗೃಹ ಸಚಿವ ಅಮಿತ್ ಶಾ ನಿವಾಸದಲ್ಲಿ ಮಹಾರಾಷ್ಟ್ರ ಸಾರಥಿ ಯಾರು ಎಂಬ ಕುರಿತು ಚರ್ಚೆ ನಡೆಯಿತು.
ಸಬೆಯಲ್ಲಿ ಮಹಾ ಹಂಗಾಮಿ ಸಿಎಂ ಏಕನಾಥ್ ಶಿಂಧೆ, ದೇವೇಂದ್ರ ಫಡ್ನವಿಸ್, ಅಜಿತ್ ಪವಾರ್ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಂದಿನ ಸಿಎಂ ಯಾರಾಗಬೇಕೆಂಬ ಕುರಿತು ಚರ್ಚೆ ನಡೆಯಿತು.
ಏಕನಾಥ್ ಶಿಂಧೆ ಅವರ ಪಕ್ಷವು ಅಮಿತ್ ಶಾ ಅವರಿಗೆ ವಿಧಾನ ಪರಿಷತ್ತಿನ ಸ್ಪೀಕರ್ ಹುದ್ದೆಯೊಂದಿಗೆ 12 ಸಚಿವ ಸ್ಥಾನಗಳನ್ನು ನೀಡಬೇಕೆಂದು ಮನವಿ ಮಾಡಿದೆ ಎಂದು ತಿಳಿದು ಬಂದಿದೆ. ಏಕನಾಥ್ ಶಿಂಧೆ ಅವರು ಸಚಿವರಾಗಿ ಗೃಹ, ನಗರಾಭಿವೃದ್ಧಿ ಸೇರಿದಂತೆ ಪ್ರಮುಖ ಖಾತೆಗಳನ್ನು ಬೇಡಿದ್ದಾರೆ ಎನ್ನಲಾಗಿದೆ.
ಮಹಾಮೈತ್ರಿಯಾಗಿ ಶಿವಸೇನೆ ಜೊತೆಗಿದೆ ಎಂದು ಅಮಿತ್ ಶಾಗೆ ಏಕನಾಥ್ ಶಿಂಧೆ ಮತ್ತೊಮ್ಮೆ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಕೂಡ ಸಿಎಂ ಆಯ್ಕೆಯ ಕುರಿತು ಮಹಾಯುತಿಯ ಮೂರು ಪಕ್ಷಗಳ ನಾಯಕರು ಸಭೆ ನಡೆಸಲಿದ್ದಾರೆ.
ಸಭೆಯ ನಂತರ ಮಾತನಾಡಿರುವ ಏಕನಾಥ್ ಶಿಂಧೆ, ಅಮಿತ್ ಶಾ ಅವರೊಂದಿಗೆ ನಡೆದ ಸಬೆ ಸಕಾರಾತ್ಮಕವಾಗಿತ್ತು. ಸಿಎಂ ಅಭ್ಯರ್ಥಿ ಸೇರಿದಂತೆ ಸರ್ಕಾರ ರಚಿಸುವ ಎಲ್ಲ ವಿಷಯಗಳಿಗೆ ಅಂತ್ಯ ಹಾಡಲಾಗುವುದು. ನಾವು ಮೂವರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದಿದ್ದಾರೆ.
ಇತ್ತೀಚೆಗೆ ಮಹಾರಾಷ್ಟ್ರದ 280 ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಈ ಪೈಕಿ ಬಿಜೆಪಿ 132 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮಿತ್ರ ಪಕ್ಷಗಳಾದ – ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ – ಕ್ರಮವಾಗಿ 57 ಮತ್ತು 41 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.