ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಮೊದಲ ಪಂದ್ಯದಲ್ಲೇ ಕಿಂಗ್ (Virat Kohli) ಮಿಂಚಿದ್ದಾರೆ. ದಾಖಲೆಗಳ ಸರದಾರ ಮೊದಲ ಪಂದ್ಯದಲ್ಲಿ ಭರ್ಜರಿ ಅರ್ಧ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವುದರ ಮೂಲಕ ಒಂದೇ ಪಂದ್ಯದಲ್ಲಿ ಮತ್ತೇ ಐದು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದಾರೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತ್ತು. 175 ರನ್ ಗಳ ಗುರಿ ಬೆನ್ನಟ್ಟಿದ ಆರ್ ಸಿಬಿ ಪರ ಫಿಲ್ ಸಾಲ್ಟ್ (56) ಹಾಗೂ ವಿರಾಟ್ ಕೊಹ್ಲಿ(59) ಅರ್ಧಶತಕ ಸಿಡಿಸಿದ್ದರು.
ಕಿಂಗ್ ಕೊಹ್ಲಿ 3 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ ಅಜೇಯ 59 ರನ್ ಬಾರಿಸಿದರು. ಈ ರನ್ ಗಳಿಂದಾಗಿ ಕೊಹ್ಲಿ 5 ದಾಖಲೆ ಬರೆದಿದ್ದಾರೆ. 1 ಸಾವಿರ ರನ್ ಸರದಾರ: ಐಪಿಎಲ್ ಇತಿಹಾಸದಲ್ಲಿ 4 ತಂಡಗಳ ವಿರುದ್ಧ 1 ಸಾವಿರ ಹಾಗೂ ಅದಕ್ಕೂ ಅಧಿಕ ರನ್ ಗಳಿಸಿದ ಏಕೈಕ ಬ್ಯಾಟರ್ ಎಂಬ ದಾಖಲೆಗೆ ವಿರಾಟ್ ಕೊಹ್ಲಿ ಸಾಕ್ಷಿಯಾಗಿದ್ದಾರೆ. ಕೊಹ್ಲಿ, ಚೆನ್ನೈ ಸೂಪರ್ ಕಿಂಗ್ಸ್ (1053), ಡೆಲ್ಲಿ ಕ್ಯಾಪಿಟಲ್ಸ್ (1057) ಮತ್ತು ಪಂಜಾಬ್ ಕಿಂಗ್ಸ್ (1030) ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ (1021) ವಿರುದ್ಧ ಈ ಸಾಧನೆ ಮಾಡಿದ್ದಾರೆ.
ಅತ್ಯಧಿಕ ಅರ್ಧಶತಕ ಪಟ್ಟಿ: ಐಪಿಎಲ್ ನ ಇತಿಹಾಸದಲ್ಲೇ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಬ್ಯಾಟರ್ ಗಳ ಪಟ್ಟಿಯಲ್ಲಿ ಕೊಹ್ಲಿ 2ನೇ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಡೇವಿಡ್ ವಾರ್ನರ್ (66) ಮೊದಲ ಸ್ಥಾನದಲ್ಲಿದ್ದರೆ, 64 ಅರ್ಧಶತಕಗಳೊಂದಿಗೆ ವಿರಾಟ್ ಕೊಹ್ಲಿ ಎರಡನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
ಕೆಕೆಆರ್ ವಿರುದ್ಧ ಉತ್ತಮ ಪ್ರದರ್ಶನ: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಕೆಕೆಆರ್ ವಿರುದ್ಧ 1 ಸಾವಿರ ರನ್ ಕಲೆ ಹಾಕಿದ ಮೂರನೇ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. ಈಗಾಗಲೇ ರೋಹಿತ್ ಶರ್ಮಾ (1070) ಮತ್ತು ಡೇವಿಡ್ ವಾರ್ನರ್ (1093) ಈ ಸಾಧನೆ ಮಾಡಿರುವ ಆಟಗಾರರಾಗಿದ್ದಾರೆ.
400 ಟಿ20 ಪಂದ್ಯದ ಸಾಧನೆ: ಟಿ20 ಕ್ರಿಕೆಟ್ ನಲ್ಲಿ 400 ಪಂದ್ಯಗಳನ್ನಾಡಿದ ಮೂರನೇ ಭಾರತೀಯ ಎಂಬ ದಾಖಲೆಯನ್ನೂ ವಿರಾಟ್ ಕೊಹ್ಲಿ ಮಾಡಿದ್ದಾರೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ (448) ಹಾಗೂ ದಿನೇಶ್ ಕಾರ್ತಿಕ್ (412) ಮಾತ್ರ 400ರ ಗಡಿ ದಾಟಿದ್ದಾರೆ.
400ರಲ್ಲಿ ಸಾಧನೆ: 400ನೇ ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೂ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಕಿಂಗ್ ಕೊಹ್ಲಿ ಆರ್ಭಟ ಮೊದಲ ಪಂದ್ಯದಿಂದ ಕೊನೆಯ ಪಂದ್ಯದವರೆಗೆ ಹೀಗೆ ಮುಂದುವರೆಯಲಿ ಎಂದು ಅಭಿಮಾನಿಗಳು ಆಶಯ ವ್ಯಕ್ತಪಡಿಸುತ್ತಿದ್ದಾರೆ.