ತಿರುವನಂತಪುರಂ: ವಿವಾದಿತ ಮಲಯಾಳಂ ಸಿನಿಮಾ “ಎಲ್2: ಎಂಪುರಾನ್”(Empuraan) ನಿರ್ದೇಶಕ ಹಾಗೂ ನಟ ಪೃಥ್ವಿರಾಜ್ ಸುಕುಮಾರನ್ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿಯಾದ ಬೆನ್ನಲ್ಲೇ ಸುಕುಮಾರ್ ಅವರ ತಾಯಿ ಪ್ರತಿಕ್ರಿಯಿಸಿದ್ದು, “ನಾವು ಇದಕ್ಕೆಲ್ಲ ಹೆದರುವುದಿಲ್ಲ” ಎಂದಿದ್ದಾರೆ.
2022ರ ತಮ್ಮ ಮೂರು ಸಿನಿಮಾಗಳಿಗಾಗಿ ಪಡೆದ ಸಂಭಾವನೆಯ ಕುರಿತು ಸ್ಪಷ್ಟೀಕರಣ ಕೋರಿ ಆದಾಯ ತೆರಿಗೆ ಇಲಾಖೆಯು ಸುಕುಮಾರನ್ ಅವರಿಗೆ ಐಟಿ ನೋಟಿಸ್ ನೀಡಿತ್ತು. ಎಂಪುರಾನ್ ಚಿತ್ರದ ಸಹ ನಿರ್ಮಾಪಕ ಗೋಕುಲಂ ಗೋಪಾಲನ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ಆರಂಭಿಸಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಈಗ ಪೃಥ್ವಿರಾಜ್‌ಗೆ ಬಂದಿರುವ ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿರುವ ಅವರ ತಾಯಿ, ಹಿರಿಯ ನಟಿ ಮಲ್ಲಿಕಾ, “ನನ್ನ ಮಗ ಯಾವ ತಪ್ಪೂ ಮಾಡಿಲ್ಲ. ನಾವು ಯಾವುದೇ ತನಿಖೆಗೆ ಹೆದರುವುದಿಲ್ಲ” ಎಂದಿದ್ದಾರೆ. ಈ ವಿಷಯದಲ್ಲಿ ನಮ್ಮನ್ನು ಸಂಪರ್ಕಿಸಿದ, ಬೆಂಬಲ ಸೂಚಿಸಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ. ಅನಾರೋಗ್ಯಕ್ಕೀಡಾಗಿ ಪ್ರಸ್ತುತ ಚೇತರಿಸಿಕೊಳ್ಳುತ್ತಿರುವ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರು ನಮ್ಮ ಕುಟುಂಬಕ್ಕೆ ನೀಡಿದ ಭಾವನಾತ್ಮಕ ಬೆಂಬಲವನ್ನೂ ಮಲ್ಲಿಕಾ ಅವರು ಸ್ಮರಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಮಮ್ಮುಟ್ಟಿ ಅವರು ಪ್ರಸ್ತುತ ಮದ್ರಾಸ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಹಾಗಿದ್ದರೂ ಅವರು ನಮಗೆ ಸ್ಪಂದಿಸಲೆಂದು ಸಮಯ ತೆಗೆದುಕೊಂಡು, ಪತ್ರ ಬರೆದಿದ್ದಾರೆ. ‘ಚೇಚಿ. ಎಲ್ಲವೂ ಸರಿಯಾಗಲಿದೆ, ಹಾದುಹೋಗಲಿದೆ’ ಎಂಬ ಅವರ ಸಂದೇಶವು ನನ್ನ ಕಣ್ಣುಗಳಲ್ಲಿ ಕಣ್ಣೀರು ತರಿಸಿತು” ಎಂದು ಹೇಳಿದ್ದಾರೆ.
ಮಮ್ಮುಟ್ಟಿ ಅವರ ಪ್ರತಿಕ್ರಿಯೆಗೆ ಭಾವುಕರಾದ ಮಲ್ಲಿಕಾ, “ಪೃಥ್ವಿರಾಜ್ ಎಲ್ಲಿ, ಮಮ್ಮುಟ್ಟಿ ಎಲ್ಲಿ. ಆದರೂ ಮಮ್ಮುಟ್ಟಿ ಅವರು ನಮ್ಮನ್ನು ಸಂಪರ್ಕಿಸಿ ಬೆಂಬಲವಾಗಿ ನಿಂತರು. ಅವರು ಅಂತಹ ಶ್ರೇಷ್ಠ ಕಲಾವಿದ” ಎಂದರು.
ಮಾರ್ಚ್ 27ರಂದು ಎಂಪುರಾನ್ ಸಿನಿಮಾ ಥಿಯೇಟರ್ ನಲ್ಲಿ ತೆರೆಕಂಡಿತ್ತು. 2002ರ ಗುಜರಾತ್ ಗಲಭೆ ಸೇರಿದಂತೆ ಸಿನಿಮಾದಲ್ಲಿ ತೋರಿಸಲಾದ ಕೆಲವು ದೃಶ್ಯಗಳು ಭಾರೀ ವಿವಾದ ಸೃಷ್ಟಿಸಿದ್ದು, ಒಂದು ವರ್ಗದ ಆಕ್ರೋಶಕ್ಕೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಐಟಿ ನೋಟಿಸ್, ಇ.ಡಿ. ತನಿಖೆಗಳು ಆರಂಭವಾಗಿದ್ದು, ರಾಜಕೀಯ ವಿವಾದದ ಸ್ವರೂಪ ಪಡೆದುಕೊಂಡಿತ್ತು.
ಸಿನಿಮಾ ವಿವಾದಕ್ಕೆ ಕಾರಣವಾದ ನಂತರ, ಚಿತ್ರದ ತಂಡವು ‘ಸ್ವಯಂಪ್ರೇರಿತವಾಗಿ’ ಚಿತ್ರಕ್ಕೆ 24 ಕಡೆ ಕತ್ತರಿ ಪ್ರಯೋಗ ಮಾಡಿತ್ತು. ಈ ಚಿತ್ರದಲ್ಲಿ ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಅವರೊಂದಿಗೆ ಮೋಹನ್ ಲಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದು ‘ಲೂಸಿಫರ್’ ಚಿತ್ರದ ಎರಡನೇ ಭಾಗವಾಗಿದ್ದು, ಮೂರನೇ ಭಾಗವನ್ನು ಈಗಾಗಲೇ ಘೋಷಿಸಲಾಗಿದೆ.