ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಯಾರಿ ನಡೆಯುತ್ತಿದ್ದು, ಈ ಬಾರಿ ಪರೀಕ್ಷಾ ಪದ್ಧತಿಯಲ್ಲಿ ಹಲವು ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಹಿಂದಿನ ವರ್ಷದ ಎಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಶೇ. 10ರಷ್ಟು ಹೆಚ್ಚುವರಿ ಗ್ರೇಸ್ ಮಾರ್ಕ್ಸ್ ನೀಡಲಾಗಿತ್ತು. ಇದು ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಹೀಗಾಗಿ ಈ ಬಾರಿ ಈ ನಿಯಮವನ್ನು ಶಿಕ್ಷಣ ಇಲಾಖೆ ರದ್ದು ಮಾಡಿದೆ. ಈ ಬಾರಿ ಗ್ರೇಸ್ ಮಾರ್ಕ್ಸ್ ಕೊಡುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆ ಈ ಬಾರಿ ಶೀಘ್ರವೇ ಬರಲಿದೆ. ಕಳೆದ ವರ್ಷ ವೆಬ್‌ಕಾಸ್ಟ್ ಮಾಡುವುದರಿಂದ ಕಡಿಮೆ ಫಲಿತಾಂಶ ಬಂದಿತ್ತು. 3 ಎಕ್ಸಾಂ ಪದ್ಧತಿ ಈಗ ಮಕ್ಕಳಿಗೆ ಅರ್ಥವಾಗಿದೆ. ಒಂದು ವೇಳೆ ಫೇಲ್ ಆದರೆ ಮತ್ತೆ ಶಾಲೆಗೆ ಸೇರುವ ವ್ಯವಸ್ಥೆಯೂ ಇದೆ. ಇದು ಮಕ್ಕಳಿಗೂ ಅರ್ಥವಾಗಿದೆ. ವಿದ್ಯಾರ್ಥಿಗಳಿಗೆ ಇರುವ ಸಮಸ್ಯೆ ಬಗ್ಗೆ ಇವತ್ತು ರಿವ್ಯೂ ಮೀಟಿಂಗ್ ಮಾಡಿದ್ದೇವೆ. ಎಲ್ಲಾ ಜಿಲ್ಲೆಯ ಡಿಸಿ, ಸಿಇಓಗಳ ಜೊತೆ ಚರ್ಚೆ ಮಾಡಿದ್ದೇವೆ. ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಾಗಲಿದೆ ಎಂದಿದ್ದಾರೆ.
ಯಾರೂ ಮಕ್ಕಳ ಮೇಲೆ ಒತ್ತಡ ಹಾಕಬಾರದು. ಕಳೆದ ಬಾರಿ ಗ್ರೇಸ್ ಅಂಕ ಕೊಟ್ಟಿದ್ದಕ್ಕೆ ಸಿಎಂ ಗರಂ ಆಗಿದ್ದರು. ಈ ಬಾರಿ ಯಾವುದೇ ಕಾರಣಕ್ಕೂ ಗ್ರೇಸ್ ಅಂಕ ನೀಡುವುದಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ನೀಡಿದ್ದ ಶೇ. 10 ಗ್ರೇಸ್ ಅಂಕದ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಆದರೆ ಳೆದ ಬಾರಿ ವೆಬ್‌ಕಾಸ್ಟಿಂಗ್ ಹಿನ್ನೆಲೆಯಲ್ಲಿ ಕೊಟ್ಟಿದ್ದ ಶೇ. 10ರಷ್ಟು ಗ್ರೇಸ್ ಅಂಕವನ್ನು ಈ ಬಾರಿ ನೀಡುವುದಿಲ್ಲ ಎಂದಿದ್ದಾರೆ.
ಈಗಾಗಲೇ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ಒಂದು ದಿನಕ್ಕೆ ಒಂದು ಅಂಕ ಎಂಬ ಕಾರ್ಯಕ್ರಮ ಇದಾಗಿದೆ. ಮಕ್ಕಳಿಗೆ ಬೆಳಗ್ಗೆ ಫೋನ್ ಮಾಡಿ ಎಬ್ಬಿಸಿ ಓದಿಸುವ ಕಾರ್ಯಕ್ರಮ, ವಿಶೇಷ ತರಗತಿಗಳನ್ನು ಮಾಡುವ ಮೂಲಕ ಅಭ್ಯಾಸ ಮಾಡುವ ಕಾರ್ಯಕ್ರಮ ಮಾಡಿದ್ದೇವೆ. ಕಿರು ಪರೀಕ್ಷೆಗಳು, ಪೂರ್ವ ಸಿದ್ಧತಾ ಪರೀಕ್ಷೆಗಳು ಮಾಡುವ ಕೆಲಸ ಮಾಡಲಾಗಿದೆ. ಸಿಇಒಗಳೇ ಪ್ರಶ್ನೆ ಪತ್ರಿಕೆ ಸಿದ್ಧ ಮಾಡಿ ಪರೀಕ್ಷೆ ಮಾಡಿದ್ದಾರೆ ಎಂದಿದ್ದಾರೆ.
ಅನಧಿಕೃತ ಶಾಲೆಗಳ ಪಟ್ಟಿ ಸಿದ್ಧವಾಗುತ್ತಿದೆ. ಶಾಲೆ ಮಾನ್ಯತೆ ನವೀಕರಣ ವಿಚಾರದಲ್ಲಿ ನಿಯಮಗಳ ಸಡಿಲದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಕಟ್ಟಡ ಕನ್ವರ್ಷನ್, ನವೀಕರಣ, ಅಗ್ನಿಶಾಮಕ ಸೇರಿ ಇರುವ ಗೊಂದಲ ನಿವಾರಣೆಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.