ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿ ನಾಯಕರಿಗೆ ನಿರಾಸೆಯಾಗಿದೆ. ಹರಿಯಾಣದಲ್ಲಿ ಭರ್ಜರಿ ಗೆಲುವು ಕಂಡಿರುವ ಬಿಜೆಪಿಗೆ ಜಮ್ಮು ಕಾಶ್ಮೀರದಲ್ಲಿ ಸೋಲು ನೋವು ತಂದಿದೆ.
ಜಮ್ಮು ಕಾಶ್ಮೀರದಲ್ಲಿ ಬಿಜೆಪಿ 29 ಸ್ಥಾನಗಳನ್ನು ಗಳಿಸಿದ್ದರೆ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿ 48 ಸ್ಥಾನಗಳನ್ನು ಗಳಿಸಿದೆ. ಆರ್ಟಿಕಲ್ 370 ರದ್ದು, ಹೊಸ ಕಾಶ್ಮೀರ ಮನವೊಲಿಕೆ ಮಾಡುವಲ್ಲಿ ವಿಫಲವಾಗಿದ್ದು ಈ ಬಾರಿಯ ಬಿಜೆಪಿ ಸೋಲಿಗೆ ಕಾರಣ ಎನ್ನಬಹುದು.
ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ), ಪಿಡಿಪಿಯಂತಹ ಪ್ರಾದೇಶಿಕ ಪಕ್ಷಗಳು ಕಾಶ್ಮೀರಿ ವಿರೋಧಿ ನೀತಿ ಎಂದು ಬಿಜೆಪಿ ವಿರುದ್ಧ ಗುಡುಗಿದ್ದು ಕೂಡ ಮತದಾರರ ಮುನಿಸಿಗೆ ಕಾರಣವಾಯಿತು. ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲಿ ಕಾಶ್ಮೀರದಲ್ಲಿ ಭಾರಿ ಭದ್ರತೆ ನಿಯೋಜಿಸಿದ್ದು ಕೂಡ ಬಿಜೆಪಿಗೆ ಹಿನ್ನಡೆಯಾಗಲು ಕಾರಣ ಎನ್ನಲಾಗುತ್ತಿದೆ. ವಾಕ್ ಸ್ವಾತಂತ್ರ್ಯದ ಹಕ್ಕನ್ನು ನಿಗ್ರಹಿಸಲಾಗುತ್ತಿದೆ ಎಂದು ಸ್ಥಳೀಯ ಪಕ್ಷಗಳು ಪ್ರಚಾರ ಮಾಡಿದವು. ಹೀಗಾಗಿ ಬಿಜೆಪಿ ವಿರುದ್ಧ ಹಲವರು ಮತ ಚಲಾಯಿಸಿದರು ಎನ್ನಲಾಗುತ್ತಿದೆ.
ನಿರುದ್ಯೋಗ ಸಮಸ್ಯೆ, ಬಿಜೆಪಿ ಭರವಸೆಗೂ ವಾಸ್ತವಕ್ಕೂ ಅಂತರವಿರುವುದು, ಬಿಜೆಪಿ ಬೆಂಬಲಿತ ಪಕ್ಷಗಳಿಗೆ ಕಾಶ್ಮೀರದಲ್ಲಿ ಮಾನ್ಯತೆ ಸಿಗದಿದ್ದುದು ಕೂಡ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಹೆಚ್ಚು ಜನಪ್ರಿಯವಾಗಿತ್ತು. ಬಿಜೆಪಿಯ ವಿರುದ್ಧ ಕಾಶ್ಮೀರಿ ವಿರೋಧಿ ನಿರೂಪಣೆ ರೂಪಿಸುವಲ್ಲಿ ಕಾಂಗ್ರೆಸ್, ಎನ್‌ಸಿ ಯಶಸ್ವಿಯಾದವು. ಹಿಂದೂ ಸಮುದಾಯದವರ ಪ್ರಾಬಲ್ಯ ಹೆಚ್ಚಾಗಿದ್ದ ಜಮ್ಮು ಪ್ರದೇಶದ ಎರಡು ಅಸೆಂಬ್ಲಿ ಸ್ಥಾನಗಳಾದ ಬಾನಿ ಮತ್ತು ರಾಂಬನ್ ನಲ್ಲಿ ಕೂಡ ಬಿಜೆಪಿ ಸೋಲು ಅನುಭವಿಸಿದ್ದು, ಹಿನ್ನಡೆಯಾಗಿದೆ.