ಬೆಂಗಳೂರು: ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಜರಬಾನಿ ಬೆನ್ನಲ್ಲೇ ಇದೀಗ ಮತ್ತೊಬ್ಬ ಅಂತಾರಾಷ್ಟ್ರೀಯ ಸ್ಟಾರ್ ಆಟಗಾರ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) ತ್ಯಜಿಸಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕಡೆ ಮುಖ ಮಾಡಿದ್ದಾರೆ. ವೆಸ್ಟ್ ಇಂಡೀಸ್ ತಂಡದ ಪ್ರಮುಖ ಸ್ಪಿನ್ನರ್ ಗುಡಕೇಶ್ ಮೋಟಿ ಅವರು ಅನಿರೀಕ್ಷಿತ ಕಾರಣವೊಂದನ್ನು ನೀಡಿ ಶಾಹೀನ್ ಅಫ್ರಿದಿ ನಾಯಕತ್ವದ ಲಾಹೋರ್ ಖಲಂದರ್ಸ್ ತಂಡದಿಂದ ಹೊರಬಂದಿದ್ದಾರೆ. ಪಿಎಸ್‌ಎಲ್ ಕೈಬಿಟ್ಟಿರುವ ಅವರು, ಇದೀಗ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಟಿ20 ವಿಶ್ವಕಪ್ ಬಳಿಕ ಭಾರತದಲ್ಲೇ ಸಿಲುಕಿದ್ದ ವೆಸ್ಟ್ ಇಂಡೀಸ್ ತಂಡ
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಪರ ಗುಡಕೇಶ್ ಮೋಟಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಆಡಿದ ಏಳು ಪಂದ್ಯಗಳಲ್ಲಿ ಹತ್ತು ವಿಕೆಟ್ ಕಬಳಿಸುವ ಮೂಲಕ ಟೂರ್ನಿಯಲ್ಲಿ ವಿಂಡೀಸ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಆದರೆ ಸೂಪರ್-8 ಹಂತದ ಕೊನೆಯ ಪಂದ್ಯದಲ್ಲಿ ಭಾರತದ ವಿರುದ್ಧ ಸೋತ ಬಳಿಕ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ವಿಮಾನ ಹಾರಾಟದಲ್ಲಿ ತೀವ್ರ ವ್ಯತ್ಯಯ ಉಂಟಾಗಿತ್ತು. ವಾಯುಪ್ರದೇಶವನ್ನು ಮುಚ್ಚಿದ್ದರಿಂದ ಅಥವಾ ಸೀಮಿತಗೊಳಿಸಿದ್ದರಿಂದ ವೆಸ್ಟ್ ಇಂಡೀಸ್ ತಂಡವು ಒಂದು ವಾರಕ್ಕೂ ಹೆಚ್ಚು ಕಾಲ ಭಾರತದಲ್ಲೇ ಉಳಿಯಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದೀಗ ವಾಣಿಜ್ಯ ವಿಮಾನಗಳ ಮೂಲಕ ಹೇಗೋ ತವರಿಗೆ ಮರಳಲು ಸಾಧ್ಯವಾಗಿರುವ ಗುಡಕೇಶ್ ಮೋಟಿ, ವಿಳಂಬ ಹಾಗೂ ಪ್ರಯಾಣದ ದಣಿವಿನ ಕಾರಣ ನೀಡಿ ಮುಂಬರುವ ಪಿಎಸ್‌ಎಲ್ ಟೂರ್ನಿಯಿಂದ ಅಧಿಕೃತವಾಗಿ ಹಿಂದೆ ಸರಿದಿದ್ದಾರೆ.
ಐಪಿಎಲ್ ಕಠಿಣ ನಿಯಮಗಳ ಭೀತಿಯಿಂದ ಸಿಎಸ್‌ಕೆಗೆ ಒಲವು
ಪಾಕಿಸ್ತಾನ್ ಸೂಪರ್ ಲೀಗ್‌ನ ಹನ್ನೊಂದನೇ ಆವೃತ್ತಿಗೆ ಲಾಹೋರ್ ಖಲಂದರ್ಸ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಏಕೈಕ ವಿಂಡೀಸ್ ವಿಶ್ವಕಪ್ ಆಟಗಾರ ಮೋಟಿ. ಆದರೆ, ಮುಂಬರುವ ಐಪಿಎಲ್ ಟೂರ್ನಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೂಡ ಇವರನ್ನು ಖರೀದಿಸಿದೆ. ಯಾವುದೇ ಪ್ರಬಲ ಗಾಯದ ಸಮಸ್ಯೆಯಿಲ್ಲದೆ ದಿಢೀರನೆ ಐಪಿಎಲ್‌ನಿಂದ ಹಿಂದೆ ಸರಿದರೆ, ಮುಂದಿನ ಎರಡು ಹರಾಜು ಪ್ರಕ್ರಿಯೆಗಳಿಂದ ನಿಷೇಧಕ್ಕೊಳಗಾಗುವ ಕಟ್ಟುನಿಟ್ಟಿನ ನಿಯಮವನ್ನು ಬಿಸಿಸಿಐ ಜಾರಿಗೆ ತಂದಿದೆ. ಇದೇ ನಿಯಮದ ಭೀತಿಯಿಂದಾಗಿ ಮೋಟಿ ಅವರು ಪಿಎಸ್‌ಎಲ್ ಕೈಬಿಟ್ಟು, ಐಪಿಎಲ್ ಆಡಲು ಸುರಕ್ಷಿತ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಕೂಡ ಇದೇ ರೀತಿ ಪಿಎಸ್‌ಎಲ್ ಬಿಟ್ಟು ಕೆಕೆಆರ್ ತಂಡವನ್ನು ಸೇರಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಮೋಟಿಗೆ ಬದಲಿಯಾಗಿ ಯುವ ಸ್ಪಿನ್ನರ್ ದುನಿತ್ ವೆಲ್ಲಾಳಗೆ ಆಯ್ಕೆ
ಗುಡಕೇಶ್ ಮೋಟಿ ಅವರ ನಿರ್ಗಮನದಿಂದ ತೆರವಾದ ಸ್ಥಾನಕ್ಕೆ ಲಾಹೋರ್ ಖಲಂದರ್ಸ್ ಫ್ರಾಂಚೈಸಿಯು ಶ್ರೀಲಂಕಾದ ಭರವಸೆಯ ಯುವ ಸ್ಪಿನ್ನರ್ ದುನಿತ್ ವೆಲ್ಲಾಳಗೆ ಅವರನ್ನು ಬದಲಿ ಆಟಗಾರನಾಗಿ ಸೇರಿಸಿಕೊಂಡಿದೆ. ಇತ್ತೀಚಿನ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ಪರ ಎಂಟು ವಿಕೆಟ್ ಕಬಳಿಸಿ ಮಿಂಚಿದ್ದ ವೆಲ್ಲಾಳಗೆ, ಎಂಟಕ್ಕಿಂತ ಕಡಿಮೆ ಎಕಾನಮಿ ಕಾಯ್ದುಕೊಂಡಿದ್ದರು. ಅತ್ಯುತ್ತಮ ಸ್ಪಿನ್ ಬೌಲಿಂಗ್ ಜೊತೆಗೆ ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡುವ ಸಾಮರ್ಥ್ಯವನ್ನೂ ಹೊಂದಿರುವ ವೆಲ್ಲಾಳಗೆ, ಮೋಟಿಗೆ ಸೂಕ್ತ ಬದಲಿ ಆಟಗಾರನಾಗಲಿದ್ದಾರೆ.
ಮಾರ್ಚ್ 26ರಿಂದ ಬಹುನಿರೀಕ್ಷಿತ ಪಾಕಿಸ್ತಾನ್ ಸೂಪರ್ ಲೀಗ್ ಶುರುವಾಗಲಿದೆ. ಈ ಬಾರಿಯ 11ನೇ ಆವೃತ್ತಿಯಲ್ಲಿ ಹೈದರಾಬಾದ್ ಕಿಂಗ್ಸ್‌ಮೆನ್ ಹಾಗೂ ರಾವಲ್ಪಿಂಡಿ ಪಿಂಡೀಸ್ ಎಂಬ ಎರಡು ಹೊಸ ಫ್ರಾಂಚೈಸಿಗಳ ಸೇರ್ಪಡೆಯೊಂದಿಗೆ ಒಟ್ಟು ಎಂಟು ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಕಳೆದ ನಾಲ್ಕು ಆವೃತ್ತಿಗಳಲ್ಲಿ ಮೂರು ಬಾರಿ ಕಪ್ ಗೆದ್ದು ಬೀಗಿರುವ, ಹಾಲಿ ಚಾಂಪಿಯನ್ ಲಾಹೋರ್ ಖಲಂದರ್ಸ್ ತಂಡವು ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹೊಸ ಫ್ರಾಂಚೈಸಿ ಹೈದರಾಬಾದ್ ಕಿಂಗ್ಸ್‌ಮೆನ್ ವಿರುದ್ಧ ಸೆಣಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಇದನ್ನೂ ಓದಿ : ಮುಸ್ತಾಫಿಜುರ್ ರೆಹಮಾನ್ ಸ್ಥಾನ ಬದಲಿ : ಕೆಕೆಆರ್ ಪಾಳಯಕ್ಕೆ ಈ ಆಟಗಾರ ನೇಮಕ



















