ಕೋಲ್ಕತ್ತಾ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪಶ್ಚಿಮ ಬಂಗಾಳದ ಆರ್‌ಜಿ ಕರ್ ಮೆಡಿಕಲ್ ಕಾಲೇಜಿನ ವೈದ್ಯೆಯ ಅತ್ಯಾಚಾರ ಪ್ರಕರಣದ ಆರೋಪಿಗೆ ಸ್ಥಳೀಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
34 ವರ್ಷದ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ದೋಷಿಯಾಗಿದ್ದ ಸಂಜಯ್ ರಾಯ್ ಗೆ ಸಿಯಾಲ್ಡಾದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅನಿರ್ಬನ್ ದಾಸ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಅಲ್ಲದೇ, ಸಂತ್ರಸ್ತೆಯ ಪೋಷಕರಿಗೆ 17 ಲಕ್ಷ ರೂ. ಪರಿಹಾರ ನೀಡುವಂತೆ ಪಶ್ಚಿಮ ಬಂಗಾಳ ಸರಕಾರಕ್ಕೂ ನ್ಯಾಯಮೂರ್ತಿ ಅನಿರ್ಬನ್ ದಾಸ್ ನಿರ್ದೇಶನ ನೀಡಿದ್ದಾರೆ.
ಆದರೆ, ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿಲ್ಲ ಎಂದು ಆಕ್ಷೇಪಿಸಿ ಪರಿಹಾರದ ಮೊತ್ತ ಸ್ವೀಕರಿಸುವುದಿಲ್ಲ ಎಂದು ಸಂತ್ರಸ್ತೆಯ ಪೋಷಕರು ಹೇಳಿದ್ದಾರೆ.
ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆರೋಪಿ ಸಂಜಯ್ ರಾಯ್ ಅಪರಾಧಿ ಎಂದು ಸ್ಥಳೀಯ ನ್ಯಾಯಾಲಯ ಇತ್ತೀಚೆಗೆ ಘೋಷಿಸಿತ್ತು. ಸೋಮವಾರ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ಹೇಳಿತ್ತು. ಈ ಪ್ರಕರಣ ಇಡೀ ದೇಶದಲ್ಲಿ ದೊಡ್ಡ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಪ್ರಕರಣದ ತನಿಖೆಯನ್ನು 162 ದಿನಗಳಲ್ಲೇ ಮುಗಿಸಲಾಗಿತ್ತು. ಮರಣ ದಂಡನೆ ವಿಧಿಸುವಂತೆ ತನಿಖೆ ಕೈಗೊಂಡಿದ್ದ ಸಿಬಿಐ, ನ್ಯಾಯಾಲಯಕ್ಕೆ ಮನವಿ ಮಾಡಿತ್ತು.