ನವದೆಹಲಿ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ರಾಜೀನಾಮೆಯ ಮಾತುಗಳನ್ನು ಆಡಿದ್ದಾರೆ.
ಜನರ ಹಿತಾಸಕ್ತಿ ಸಲುವಾಗಿ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ. ಕೋಲ್ಕತಾದ ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿರುವ ಪ್ರತಿಭಟನೆ ವಿಚಾರದಲ್ಲಿ ವೈದ್ಯಕೀಯ ಸಿಬ್ಬಂದಿ ಹಾಗೂ ಟಿಎಂಸಿ ಸರ್ಕಾರದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಈ ಮಧ್ಯೆಯೇ ಮಮತಾ ಬ್ಯಾನರ್ಜಿ ಈ ಮಾತುಗಳನ್ನು ಹೇಳಿದ್ದಾರೆ.
ಪ್ರತಿಭಟನಾನಿರತ ವೈದ್ಯರ ಜತೆ ಮಾತುಕತೆ ನಡೆಸಲು ತಮ್ಮ ಸರ್ಕಾರ ಸಿದ್ಧ. ಬಹುತೇಕ ವೈದ್ಯರು ಸಭೆಯಲ್ಲಿ ಭಾಗಿಯಾಗಲು ಆಸಕ್ತಿ ಹೊಂದಿದ್ದಾರೆ. ಗದ್ದಲ ಸೃಷ್ಟಿಸುವುದಕ್ಕಾಗಿಯೇ ಹಲವರು ಕಾಯುತ್ತಿದ್ದಾರೆ. ಪ್ರತಿಭಟನೆಗಳು ರಾಜಕೀಯ ಪ್ರೇರಿತ. ಇದಕ್ಕೆ ಎಡಪಕ್ಷಗಳು ಬೆಂಬಲ ನೀಡುತ್ತಿವೆ ಎಂದು ಕಿಡಿಕಾರಿದ್ದಾರೆ.
ಜನ ಸಾಮಾನ್ಯರಿಗೆ ನ್ಯಾಯ ದೊರಕಿಸಲು ನಾನು ರಾಜೀನಾಮೆ ನೀಡಲು ಕೂಡ ಸಿದ್ಧ. ಆದರೆ ಅವರಿಗೆ ನ್ಯಾಯ ಬೇಕಿಲ್ಲ. ನನ್ನ ಕುರ್ಚಿ ಬೇಕಿದೆ. ಈ ಮೂಲಕ ನಮ್ಮ ಸರ್ಕಾರಕ್ಕೆ ಹಲವರು ಅವಮಾನ ಮಾಡಲು ಮುಂದಾಗಿದ್ದಾರೆ. ರಾಜಕೀಯ ಬಣ್ಣ ಇದೆ ಎನ್ನುವುದು ಸಾಮಾನ್ಯ ಜನರಿಗೆ ತಿಳಿಯುತ್ತಿಲ್ಲ. ಸಾಮಾನ್ಯ ಜನರಿಗೆ ವೈದ್ಯಕೀಯ ಚಿಕಿತ್ಸೆ ಸಿಗಲೆಂದು ನಾನು ಬಯಸಿದ್ದೇನೆ” ಎಂದು ಹೇಳಿದ್ದಾರೆ.
ರಾಜ್ಯ ಕಾರ್ಯಾಲಯದಲ್ಲಿ ಪ್ರತಿಭಟನಾನಿರತ ವೈದ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಎರಡು ಗಂಟೆಗಳಿಂದ ಕಾದು ಕುಳಿತಿದ್ದು, ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಕಿಡಿಕಾರಿದ್ದಾರೆ. ರಾಜ್ಯ ಕಾರ್ಯಾಲಯದವರೆಗೂ ವೈದ್ಯರ ತಂಡ ತೆರಳಿತ್ತು. ತಮ್ಮ ಸಭೆಯನ್ನು ನೇರ ಪ್ರಸಾರ ಮಾಡಬೇಕು ಎಂದು ಆಗ್ರಹಿಸಿದ್ದ ಅವರು ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಲು ನಿರಾಕರಿಸಿದರು. ಈ ಮಧ್ಯೆ ದೀದಿ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.