ನವದೆಹಲಿ : ಟಿ20 ವಿಶ್ವಕಪ್ ಸಮೀಪಿಸುತ್ತಿದ್ದಂತೆಯೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಡುತ್ತಿರುವ ನಾಟಕಗಳಿಗೆ ಐಸ್‌ಲ್ಯಾಂಡ್ ಕ್ರಿಕೆಟ್ ಮಂಡಳಿ ಕಾಲೆಳೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಟ್ರೋಲ್ ಮಾಡಿದೆ. “ಒಂದು ವೇಳೆ ಪಾಕಿಸ್ತಾನ ಟೂರ್ನಿಯಿಂದ ಹಿಂದೆ ಸರಿದರೆ, ಅವರ ಬದಲಿ ತಂಡವಾಗಿ ಆಡಲು ನಾವು ಸಿದ್ಧ,” ಎಂದು ಐಸ್‌ಲ್ಯಾಂಡ್ ವ್ಯಂಗ್ಯವಾಡಿದೆ.
ಬಾಂಗ್ಲಾದೇಶ ತಂಡವು ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿ ಟೂರ್ನಿಯಿಂದ ಹೊರಬಿದ್ದ ನಂತರ, ಪಾಕಿಸ್ತಾನ ಕೂಡ ಇದೇ ರೀತಿಯ ಬೆದರಿಕೆ ಹಾಕುತ್ತಿದೆ ಎಂಬ ವದಂತಿಗಳ ಬೆನ್ನಲ್ಲೇ ಐಸ್‌ಲ್ಯಾಂಡ್ ಈ ಟ್ವೀಟ್ ಮಾಡಿದೆ.
ಐಸ್‌ಲ್ಯಾಂಡ್ ಕ್ರಿಕೆಟ್ ಟ್ವೀಟ್‌ನಲ್ಲೇನಿದೆ?
ಐಸ್‌ಲ್ಯಾಂಡ್ ಕ್ರಿಕೆಟ್ ತನ್ನ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಪಾಕಿಸ್ತಾನವನ್ನು ತಮಾಷೆ ಮಾಡುತ್ತಾ ಹೀಗೆ ಬರೆದಿದೆ.. “ಪಾಕಿಸ್ತಾನ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುತ್ತದೋ ಇಲ್ಲವೋ ಎಂಬುದನ್ನು ಆದಷ್ಟು ಬೇಗ ನಿರ್ಧರಿಸಬೇಕು. ಫೆಬ್ರವರಿ 2 ರಂದು ಅವರು ಹಿಂದೆ ಸರಿದರೆ, ತಕ್ಷಣವೇ ಹೊರಡಲು ನಾವು ಸಿದ್ಧರಿದ್ದೇವೆ! ಆದರೆ, ಫೆಬ್ರವರಿ 7 ರೊಳಗೆ ಕೊಲಂಬೊ ತಲುಪಲು ವಿಮಾನದ ವೇಳಾಪಟ್ಟಿ ಹೊಂದಿಸುವುದು ನಮಗೆ ಸ್ವಲ್ಪ ಕಷ್ಟವಾಗಬಹುದು. ಚಿಂತೆಯಿಲ್ಲ, ನಮ್ಮ ಆರಂಭಿಕ ಆಟಗಾರನಿಗೆ ನಿದ್ರಾಹೀನತೆ (insomnia) ಸಮಸ್ಯೆ ಇದೆ, ಹಾಗಾಗಿ ಅವನೇನು ಮಲಗುವುದಿಲ್ಲ!.. ಈ ಟ್ವೀಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪಾಕಿಸ್ತಾನದ ನಡೆಯನ್ನು ಟೀಕಿಸುತ್ತಿರುವ ಕ್ರಿಕೆಟ್ ಅಭಿಮಾನಿಗಳಿಗೆ ನಗೆಯುಕ್ಕಿಸಿದೆ.

ಏನಿದು ವಿವಾದ?
ಬಾಂಗ್ಲಾದೇಶ ತಂಡವು ಭದ್ರತಾ ಕಾರಣಗಳನ್ನು ಮುಂದಿಟ್ಟು ಭಾರತಕ್ಕೆ ಬರಲು ನಿರಾಕರಿಸಿದಾಗ, ಐಸಿಸಿ (ICC) ಅವರನ್ನು ಟೂರ್ನಿಯಿಂದಲೇ ಕೈಬಿಟ್ಟು ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಿತ್ತು. ಇದನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಕ್ವಿ ವಿರೋಧಿಸಿದ್ದರು. “ನಮಗೆ ತಟಸ್ಥ ಸ್ಥಳದಲ್ಲಿ (Neutral Venue) ಆಡಲು ಅವಕಾಶ ಕೊಟ್ಟಂತೆ ಬಾಂಗ್ಲಾದೇಶಕ್ಕೂ ಕೊಡಬೇಕಿತ್ತು,” ಎಂದು ಅವರು ವಾದಿಸಿದ್ದರು.
ಇದೀಗ ಪಾಕಿಸ್ತಾನ ಕೂಡ ಕೊನೆ ಕ್ಷಣದಲ್ಲಿ ಟೂರ್ನಿ ಬಹಿಷ್ಕರಿಸುವ ಬೆದರಿಕೆ ಹಾಕುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಐಸಿಸಿ ಈಗಾಗಲೇ ಪಾಕಿಸ್ತಾನಕ್ಕೆ ಕಟು ಎಚ್ಚರಿಕೆ ನೀಡಿದ್ದು, “ಒಂದು ವೇಳೆ ನೀವು ಬಾಂಗ್ಲಾದೇಶದಂತೆ ಕೊನೆ ಕ್ಷಣದಲ್ಲಿ ಹಿಂದೆ ಸರಿದರೆ, ಕಠಿಣ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ,” ಎಂದು ಖಡಕ್ ಸಂದೇಶ ರವಾನಿಸಿದೆ.
ಪ್ರಸ್ತುತ ಪಾಕಿಸ್ತಾನದ ಪಂದ್ಯಗಳನ್ನು ‘ಹೈಬ್ರಿಡ್ ಮಾದರಿ’ಯ ಅಡಿಯಲ್ಲಿ ಶ್ರೀಲಂಕಾದ ಕೊಲಂಬೊದಲ್ಲಿ ಆಯೋಜಿಸಲಾಗಿದೆ. ಫೆಬ್ರವರಿ 15 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯ ನಡೆಯಬೇಕಿದೆ.
ಇದನ್ನೂ ಓದಿ : ಸಮರ್ಪಿತ ನಾಯಕನನ್ನು ಕಳೆದುಕೊಂಡೆವು | ಅಜಿತ್ ಪವಾರ್ ನಿಧನಕ್ಕೆ ಸಚಿನ್ ತೆಂಡೂಲ್ಕರ್ ಕಂಬನಿ!



















