ಬೆಂಗಳೂರು: ಗ್ಯಾಸ್ ಸಿಲಿಂಡರ್ ಕೊರತೆಯಿಂದಾಗಿ ನಗರದಲ್ಲಿ ವೆಲ್ಡಿಂಗ್ ಅಂಗಡಿಗಳು ಬಂದ್ ಆಗಿದ್ದು, ಅಪಘಾತಗೊಂಡ ವಾಹನಗಳು ಗ್ಯಾರೇಜ್‌ಗಳ ಮುಂದೆ ಸಾಲು ಸಾಲಾಗಿ ನಿಂತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾಗಿದೆ ಎಂದು ಹೇಳಲಾಗುತ್ತಿದೆ. ಇದರ ಪರಿಣಾಮವಾಗಿ ಹಲವು ವ್ಯಾಪಾರಗಳು ಸಂಕಷ್ಟಕ್ಕೆ ಸಿಲುಕಿದ್ದು, ಈಗಾಗಲೇ ಕೆಲವು ಹೋಟೆಲ್‌ಗಳು ತಾತ್ಕಾಲಿಕವಾಗಿ ಬಂದ್ ಆಗಿವೆ. ಇದೀಗ ಗ್ಯಾಸ್ ಸಿಲಿಂಡರ್ ಮೇಲೆ ಸಂಪೂರ್ಣ ಅವಲಂಬಿತವಾಗಿರುವ ವೆಲ್ಡಿಂಗ್ ಅಂಗಡಿಗಳಿಗೂ ದೊಡ್ಡ ಹೊಡೆತ ಬಿದ್ದಿದೆ.
ನಗರದ ಹಲವೆಡೆ ವೆಲ್ಡಿಂಗ್ ಅಂಗಡಿಗಳಿಗೆ ಕಳೆದ ಸುಮಾರು 10 ದಿನಗಳಿಂದ ಗ್ಯಾಸ್ ಸಿಲಿಂಡರ್ ಸಿಗದೆ ಕಾರ್ಯ ನಿಲ್ಲಿಸುವಂತಾಗಿದೆ. ಹೋಟೆಲ್‌ಗಳಿಗೆ ಪರ್ಯಾಯವಾಗಿ ಸೌದೆ ಅಥವಾ ಎಲೆಕ್ಟ್ರಿಕ್ ಸ್ಟೋವ್ ಮೂಲಕ ಅಡುಗೆ ಮಾಡುವ ಅವಕಾಶ ಇದ್ದರೂ, ವೆಲ್ಡಿಂಗ್ ಅಂಗಡಿಗಳಿಗೆ ಅಂತಹ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಸಂಪೂರ್ಣವಾಗಿ ಬಂದ್ ಮಾಡುವ ಪರಿಸ್ಥಿತಿ ಎದುರಾಗಿದೆ.
ಮುಖ್ಯವಾಗಿ ಆಟೋ, ಕಾರು, ಲಾರಿ ಸೇರಿದಂತೆ ವಿವಿಧ ವಾಹನಗಳ ಬಿಡಿಭಾಗಗಳನ್ನು ಜೋಡಿಸಲು ವೆಲ್ಡಿಂಗ್ ಅತ್ಯಗತ್ಯವಾಗಿದೆ. ಅಪಘಾತಕ್ಕೊಳಗಾದ ವಾಹನಗಳ ಚಾಸಿಸ್, ಸ್ಟೀರಿಂಗ್ ರಾಡ್ ಸೇರಿದಂತೆ ಹಲವು ಭಾಗಗಳ ಮರುಜೋಡಣೆಗೆ ಗ್ಯಾಸ್ ವೆಲ್ಡಿಂಗ್ ಅಗತ್ಯವಿದ್ದು, ಸಿಲಿಂಡರ್ ಕೊರತೆಯಿಂದ ಈ ಕೆಲಸಗಳು ಸ್ಥಗಿತಗೊಂಡಿವೆ. ಹೊಸ ವಾಹನಗಳ ಬಾಡಿ ಬಿಲ್ಡ್ ಮಾಡುವ ಕೆಲಸಕ್ಕೂ ಗ್ಯಾಸ್ ಸಿಲಿಂಡರ್ ಅವಶ್ಯಕವಾಗಿದೆ.
ನಗರದ ಕಲಾಸಿಪಾಳ್ಯ, ಶಿವಾಜಿನಗರ, ಗೌರಿಪಾಳ್ಯ ಸೇರಿದಂತೆ ಹಲವೆಡೆ ವೆಲ್ಡಿಂಗ್ ಅಂಗಡಿಗಳು ಮುಚ್ಚಿರುವುದರಿಂದ ಅಪಘಾತಗೊಂಡ ವಾಹನಗಳು ಗ್ಯಾರೇಜ್‌ಗಳ ಮುಂದೆ ಸಾಲು ಸಾಲಾಗಿ ನಿಂತಿರುವ ದೃಶ್ಯ ಕಂಡು ಬರುತ್ತಿದೆ. ವಾಹನಗಳ ದುರಸ್ತಿ ಸಾಧ್ಯವಾಗದೆ ವಾಹನ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇನ್ನೊಂದೆಡೆ ಗ್ಯಾಸ್ ಸಿಗದೆ ಅಂಗಡಿಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಬಂದಿರುವುದರಿಂದ ವೆಲ್ಡಿಂಗ್ ಅಂಗಡಿ ಮಾಲೀಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. “ಗ್ಯಾಸ್ ಸಿಲಿಂಡರ್ ಸಿಗದೆ ಕೆಲಸವೇ ಇಲ್ಲದಂತಾಗಿದೆ. ದಿನಗೂಲಿ ಮೇಲೆ ಬದುಕುವ ನಮಗೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದಿದೆ” ಎಂದು ಅಂಗಡಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಗ್ಯಾಸ್ ಸರಬರಾಜು ಶೀಘ್ರದಲ್ಲೇ ಸರಿಯಾಗದಿದ್ದರೆ ವಾಹನ ದುರಸ್ತಿ ಉದ್ಯಮ ಸೇರಿದಂತೆ ಹಲವಾರು ಸಣ್ಣ ವ್ಯಾಪಾರಗಳ ಮೇಲೆ ಇನ್ನಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ.
ಇದನ್ನೂ ಓದಿ : ರಾಜ್ಯದ ಹಲವೆಡೆ ಮಳೆಯೋ..ಮಳೆ! ಬಿಸಿಲಿನ ಬೇಗೆಗೆ ತಂಪೆರೆದ ವರುಣ



















