ಉಡುಪಿ : ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದ ಮುಖ್ಯ ಕಾರ್ಯದರ್ಶಿಯಾಗಿ ಉಡುಪಿ ಜಿಲ್ಲೆಯ ರಾಜೇಶ್ ಪ್ರಸಾದ್ ಐಎಎಸ್ ಇವರನ್ನು ನೇಮಕ ಮಾಡಿ ಕೇಂದ್ರ ಗೃಹ ಸಚಿವಾಲಯ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಇದೀಗ ಕೇಂದ್ರದ ಆದೇಶದಂತೆ ರಾಜೇಶ್ ಪ್ರಸಾದ್ ಕರ್ತವ್ಯಕ್ಕೆ ತೆರಳಿದ್ದು, ಚಂಡೀಗಢದಲ್ಲಿ ಅವರಿಗೆ ಸಕಲ ಗೌರವದಿಂದ ಅದ್ದೂರಿಯಾಗಿ ಸ್ವಾಗತಿಸಲಾಗಿದೆ.

ರಾಜೇಶ್ ಪ್ರಸಾದ್ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ಜನಿಸಿದ್ದು, ತಮ್ಮ ಪದವಿ ಶಿಕ್ಷಣವನ್ನು ಜಿಲ್ಲೆಯಲ್ಲೆ ಪಡೆದಿದ್ದಾರೆ. ನಂತರ ಎಂಬಿಎ ವಿಷಯದಲ್ಲಿ ಸ್ನಾತಕೋತರ ಪದವಿಯನ್ನು ಪಾಂಡಿಚೇರಿ ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ.

1995 ಬ್ಯಾಚ್ ಐಎಎಸ್ ಆಫೀಸರ್ ಆಗಿರುವ ರಾಜೇಶ್ ಪ್ರಸಾದ್ ಡೆಲ್ಲಿ, ಅರುಣಾಚಲ ಪ್ರದೇಶ, ಜಮ್ಮು ಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಲ್ಲಿ, ಕೇಂದ್ರ ಸರ್ಕಾರದ ವಿವಿಧ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ.ಸದ್ಯ ಕರ್ನಾಟಕದ ವಿಶೇಷವಾಗಿ ಉಡುಪಿಯ ಜನರು ಅಭಿನಂದನೆಗಳ ಜೊತೆ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.