ಕುಂದಾಪುರ: ನವರಾತ್ರಿಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಕಾನ್ ಬೇರು ಹೊಸೂರಿನಲ್ಲಿನ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿವೆ.
ಈ ಕುರಿತು ದೇವಸ್ಥಾನ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಧಾರ್ಮಿಕ ಕಾರ್ಯಕ್ರಮಗಳು ಅ. 3ರಿಂದ ಆರಂಭಗೊಂಡಿದ್ದು, ಅ. 12ರ ವರೆಗೆ ನಡೆಯಲಿವೆ. ಶರನ್ನವರಾತ್ರಿ ಉತ್ಸವದ ಅಂಗವಾಗಿ ದೇವಿಯ ಸನ್ನಿಧಾನದಲ್ಲಿ ಪ್ರತಿ ದಿನ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12ರ ವರೆಗೆ ಚಂಡಿಕಾ ಹೋಮ, ದುರ್ಗಾ ಹೋಮ ಮತ್ತು ವಿಶೇಷ ಪೂಜೆಗಳು ಜರುಗಲಿವೆ.

ಸಂಜೆ 5 ರಿಂದ ದೇವಿಯ ಕಲ್ಪೋಕ್ತ ಪೂಜೆ, ಸಹಸ್ರ ನಾಮಾರ್ಚನೆ, ಚಂಡಿಕಾ ಸಪ್ತಶತಿ ಪಾರಾಯಣ ಸೇವೆ ನಡೆಯಲಿದೆ. ಸಂಜೆ 6ರಿಂದ ಸಾಂಸ್ಕ್ರೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನ ರಾತ್ರಿ 9 ರಿಂದ ಅನ್ನದಾನ ಸೇವೆ ನಡೆಯಲಿದೆ. ಅ. 12ರಂದು ವಿಜಯ ದಶಮಿ ಕಾರ್ಯಕ್ರಮದೊಂದಿಗೆ ನವರಾತ್ರಿ ಉತ್ಸವ ಮುಕ್ತಾಯವಾಗಲಿದೆ. ಹೀಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕೋರಲಾಗಿದೆ.
ದೇವಸ್ಥಾನದ ಅಧ್ಯಕ್ಷ ಡಿ. ಶಿವರಾಮ ಶೆಟ್ಟಿ ದೇವಲ್ಕುಂದ ಮಾತನಾಡಿ, 400 ವರ್ಷಗಳಷ್ಟು ಇತಿಹಾಸವನ್ನು ಹೊಂದಿರುವ ಮಹಿಷ ಮರ್ದಿನಿ ದೇವಸ್ಥಾನವು ಬಹಳಷ್ಟು ಶಕ್ತಿ ಹೊಂದಿದೆ. ಭಕ್ತರ ಸಹಕಾರದಿಂದ ಕಳೆದ ಮೂರು ವರ್ಷಗಳ ಹಿಂದೆ ದೇವಸ್ಥಾನದ ಜೀರ್ಣೋದ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ಸಾಗುತ್ತಿದೆ ಎಂದು ಹೇಳಿದ್ದಾರೆ.

ಮುಖಂಡ ಪ್ರವೀಣ ಶೆಟ್ಟಿ ಮಾತನಾಡಿ, ಕಷ್ಟ ಎಂದು ಬೇಡಿ ಬಂದವರ ಸಂಕಷ್ಟವನ್ನು ನಿವಾರಿಸುವ ಮಹಿಷ ಮರ್ದಿನಿ ದೇವಿಯ ಶಕ್ತಿ ಅಪಾರವಾಗಿದೆ. ಹೀಗಾಗಿ ಈ ಭಾಗದ ಜನರು ದೇವಿಯ ಆರಾಧನೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಕಾರ್ಯದರ್ಶಿ ರಾಜೀವ ಶೆಟ್ಟಿ ಸುಣ್ಣದಗುಂಡಿ ಮಾತನಾಡಿ, ಹೊಸೂರು- ಕಾನ್ನಬೇರು ದೇವಸ್ಥಾನದಲ್ಲಿ ಹತ್ತು ದಿನಗಳ ಕಾಲ ಧಾರ್ಮಿಕ ಕಾರ್ಯಗಳು ನಡೆಯುತ್ತವೆ. ಭಕ್ತರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದಿದ್ದಾರೆ.
ಸೇವಾಕರ್ತರಾದ ನಾಗರತ್ನ ನಸರಸಿಂಹ ಶೆಟ್ಟಿ, ಅಶೋಕ ಶೆಟ್ಟಿ ದೇವಲ್ಕುಂದ ಹೆಚ್ಚಿನ ಜನರು ಆಗಮಿಸಬೇಕೆಂದು ಮನವಿ ಮಾಡಿದ್ದಾರೆ.