ತೆಲುಗು ಚಿತ್ರರಂಗದ ಮೇರು ಕುಟುಂಬಗಳಲ್ಲಿ ಅಕ್ಕಿನೇನಿ ಕುಟುಂಬಕ್ಕೆ ತನ್ನದೇ ಆದ ವರ್ಚಸ್ಸಿದೆ. ಅಕ್ಕಿನೇನಿ ನಾಗೇಶ್ವರ್ ರಾವ್ ರಿಂದ ಆರಂಭವಾದ ಸಿನಿಮಾ ಪರಂಪರೆ ಇದೀಗ ಮೂರನೇ ತಲೆಮಾರಿಗೆ ಬಂದು ತಲುಪಿದೆ. ಇದೇ ಮೂರನೇ ತಲೆಮಾರಿನ ಅಖಿಲ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡೋ ಮೂಲಕ ಕುಟುಂಬದಲ್ಲಿ ಮದುವೆ ಸಡಗರ ಮನೆ ಮಾಡಿತ್ತು.
ಜೈನಾಬ್ ರಾವ್ಜಿ ಜೊತೆ ಸಪ್ತಪದಿ ತುಳಿದ ಅಖಿಲ್
ಬಹುಕಾಲದ ಗೆಳತಿ ಜೈನಾಬ್ ರಾವ್ಜಿ ಜೊತೆ ಅಖಿಲ್ ಅಕ್ಕಿನೇನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೈದ್ರಾಬಾದ್ ನ ಪ್ರತಿಷ್ಠಿತ ಉದ್ಯಮಿ ಆಗಿರುವ ಜುಲ್ಫಿ ರಾವ್ಜಿಯವರ ಪುತ್ರಿ. ದಕ್ಷಿಣ ಭಾರತದ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿರುವ ಜುಲ್ಫಿ ಕುಟಂಬವೀಗ ಅಕ್ಕಿನೇನಿ ಕುಟುಂಬದೊಟ್ಟಿಗೆ ಸಂಬಂಧ ಬೆಳೆಸಿದೆ. 39 ವರ್ಷದ ಜೈನಾಬ್ ಓರ್ವ ಹವ್ಯಾಸಿ ಪೇಂಟರ್. 2012ರಿಂದ ಪೇಂಟಿಂಗ್ ಗಳನ್ನು ರಚಿಸಿ ಅವುಗಳ ಪ್ರದರ್ಶನ ಏರ್ಪಡಿಸೋ ಮೂಲಕ ಜೈನಾಬ್ ತಮ್ಮದೇ ಆದ ವರ್ಚಸ್ಸು ಗಿಟ್ಟಿಸಿದವರು.
ಅಖಿಲ್ ಕಲ್ಯಾಣಕ್ಕೆ ಅತಿರಥ ಮಹಾರಥರು ಸಾಕ್ಷಿ
ಹೈದ್ರಾಬಾದ್ ನ ನಿವಾಸದಲ್ಲಿ ನಡೆದ ಸರಳ ಕಲ್ಯಾಣದಲ್ಲಿ ಕುಟುಂಬಸ್ತರು ಭಾಗಿಯಾಗಿದ್ರು. ಇನ್ನು ನಿನ್ನೆ ನಡೆದ ಆರತಕ್ಷೆತೆಯಲ್ಲಿ ಸಮಸ್ತ ದಕ್ಷಿಣ ಭಾರತ ಚಿತ್ರರಂಗವೇ ಪಾಲ್ಗೊಂಡಿತ್ತು. ಅದ್ರಲ್ಲೂ ಕನ್ನಡದ ಕೆಜಿಎಫ್ ನಟ ಯಶ್ ನವ ದಂಪತಿಗೆ ಆಶೀರ್ವದಿಸಿ ಗಮನ ಸೆಳೆದ್ರು. ಅಷ್ಟೇ ಅಲ್ಲಾ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಜೊತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ರು.
ಉಳಿದಂತೆ, ಸೂಪರ್ ಸ್ಟಾರ್ ಮಹೇಶ್ ಬಾಬು, ಯಂಗ್ ಮೆಗಾ ಸ್ಟಾರ್ ರಾಮ್ ಚರಣ್, ತಮಿಳಿನ ಸೂಪರ್ ಸ್ಟಾರ್ ಸೂರ್ಯ, ವೆಂಕಟೇಶ್, ಅಲ್ಲರಿ ನರೇಶ್, ನಾನಿ ಕೂಡಾ ಉಪಸ್ಥಿತರಿದ್ದರು. ನಿರ್ಮಾಪಕರಾದ ಅಲ್ಲು ಅರವಿಂದ್, ಅಶ್ವಿನಿ ದತ್, ದಿಲ್ ರಾಜು, ನಿರ್ದೇಶಕರಾದ ಸುಕುಮಾರ್ ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕೂಡಾ ದಂಪತಿಗೆ ಆಶೀರ್ವಾದ ಮಾಡಿದರು.