ನವದೆಹಲಿ: “ಜೀನ್ಸ್(jeans) ಧರಿಸುವುದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ಜನರು ತಮ್ಮ ಜೀನ್(genes)ಗಳನ್ನು ಮರೆಯಬಾರದು” ಎಂದು ಪರಮಾರ್ಥ ನಿಕೇತನ ಆಶ್ರಮದ ಆಧ್ಯಾತ್ಮಿಕ ಮುಖ್ಯಸ್ಥ ಚಿದಾನಂದ ಸರಸ್ವತಿ(Chidanand Saraswati) ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಇಂಡಿಯಾ ಟುಡೇ ಸಮಾವೇಶ 2025 ರಲ್ಲಿ ಮಾತನಾಡಿದ ಆಧ್ಯಾತ್ಮಿಕ ಗುರು ಚಿದಾನಂದ ಸರಸ್ವತಿ, ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ(Maha Kumbh) ಮೇಳದ ಸಮಯದಲ್ಲಿ ಜೀನ್ಸ್ ಧರಿಸಿದ್ದ ಮಗುವೊಂದು ತಮ್ಮ ಬಳಿಗೆ ಬಂದ ಪ್ರಸಂಗವನ್ನು ವಿವರಿಸಿದರು. ಆ ಮಗು ನನ್ನ ಬಳಿ ಬಂದು, “ನನಗೆ ಈಗ ನಾನು ವಿಭಿನ್ನ ವ್ಯಕ್ತಿ ಎಂಬಂತೆ ಭಾಸವಾಗುತ್ತಿದೆ. ನಾನು ಇನ್ನು ಮುಂದೆ ನನ್ನ ಉಡುಗೆಯನ್ನೂ ಬದಲಾಯಿಸಬೇಕು, ಜೀನ್ಸ್ ಧರಿಸುವುದನ್ನು ನಿಲ್ಲಿಸಬೇಕೇ” ಎಂದು ಕೇಳಿತು.
“ನೀವು ಏನು ಧರಿಸಿದ್ದೀರಿ ಎಂಬುದರ ಬಗ್ಗೆ ನನಗೆ ಚಿಂತೆಯಿಲ್ಲ. ಜೀನ್ಸ್(jeans) ಧರಿಸಿ, ಆದರೆ ನಿಮ್ಮ ಜೀನ್(genes)ಗಳನ್ನು ನೀವು ಮರೆಯಬಾರದು ಎಂಬುದಷ್ಟೇ ನನ್ನ ಕಾಳಜಿ. ಎಷ್ಟೇ ಉನ್ನತ ಮಟ್ಟಕ್ಕೇರಿದರೂ ನಿಮ್ಮ ಬೇರುಗಳನ್ನು ಮರೆಯಬಾರದು. ಏಕೆಂದರೆ ಅದು ತುಂಬಾ ಮುಖ್ಯ” ಎಂದು ಆಧ್ಯಾತ್ಮಿಕ ಗುರುಗಳು ಹೇಳಿದ್ದಾರೆ.
ಎಲಾನ್ ಮಸ್ಕ್ ಕುಂಭಮೇಳಕ್ಕೆ ಬರುವವರಿದ್ದರು:
ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿರಂಜನಿ ಅಖಾಡದ ಆಧ್ಯಾತ್ಮಿಕ ಮುಖ್ಯಸ್ಥ ಸ್ವಾಮಿ ಕೈಲಾಸಾನಂದ ಗಿರಿ ಅವರು ಮಾತನಾಡಿ, ವಿಶ್ವದ ಶ್ರೀಮಂತ ಉದ್ಯಮಿ, ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್(Elon Musk) ಅವರೂ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳಕ್ಕೆ ಬರಲು ಬಯಸಿದ್ದರು. ಅವರು ನಮ್ಮ ಶಿಬಿರದಲ್ಲೇ ಉಳಿಯಲೂ ಮುಂದಾಗಿದ್ದರು ಎಂದು ಹೇಳಿದ್ದಾರೆ.
“ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ಅವರಿಂದ ನನಗೆ ಸಂದೇಶ ಬಂದಿತ್ತು. ಅವರು ಮಹಾ ಕುಂಭಕ್ಕೆ ಬಂದು ನನ್ನ ಶಿಬಿರದಲ್ಲಿ ಉಳಿಯಲು ಬಯಸಿರುವುದಾಗಿ ಸಂದೇಶ ಕಳುಹಿಸಿದ್ದರು. ಕುಂಭಮೇಳಕ್ಕೆ ಆಗಮಿಸಿದ್ದ ಆಪಲ್ ಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಅವರು, ಕುಂಭದ ಕುರಿತು ಎಲಾನ್ ಮಸ್ಕ್ ಅವರಿಗೆ ತಿಳಿಸಿದ್ದರು. ಹೀಗಾಗಿ ಅವರು ಬರಲು ಇಚ್ಛೆ ವ್ಯಕ್ತಪಡಿಸಿದ್ದರು” ಎಂದು ಸ್ವಾಮಿ ಕೈಲಾಸಾನಂದ ಗಿರಿ ಹೇಳಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಜನವರಿ 13ರಿಂದ ಫೆಬ್ರವರಿ 26ರವರೆಗೆ ಮಹಾಕುಂಭಮೇಳ ನಡೆದಿತ್ತು. ಅದರಲ್ಲಿ 55 ಲಕ್ಷ ವಿದೇಶಿಯರು ಸೇರಿದಂತೆ 66 ಕೋಟಿಗೂ ಹೆಚ್ಚು ಭಕ್ತರು ಪುಣ್ಯ ಸ್ನಾನ ಮಾಡಿದ್ದರು.