ಬೆಂಗಳೂರು: ಆಯುಧ ಪೂಜೆ ಹಬ್ಬಕ್ಕೆ ಸರ್ಕಾರಿ ಬಸ್‌ಗಳಿಗೆ ಪೂಜೆ ಸಲ್ಲಿಸಲು ಸಾರಿಗೆ ಇಲಾಖೆಯಿಂದ ಹಣ ಬಿಡುಗಡೆ ಮಾಡಲಾಗಿದ್ದು, ಪ್ರತಿ ಬಸ್‌ಗೆ ಕೇವಲ 150 ರೂ. ಬಿಡುಗಡೆ ಮಾಡಿದೆ.
ಪ್ರತಿ ವರ್ಷ ದಸರಾ ಹಿನ್ನೆಲೆಯಲ್ಲಿ ಆಯುಧ ಪೂಜೆ ಹಬ್ಬದಲ್ಲಿ ಸಾರಿಗೆ ಬಸ್‌ಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಅದಕ್ಕಾಗಿ ಸಾರಿಗೆ ಇಲಾಖೆಯು ಪ್ರತಿ ಬಸ್, ಇಲಾಖಾ ವಾಹನಕ್ಕೆ ಹಣ ಬಿಡುಗಡೆ ಮಾಡಲಿದೆ. ಈ ಬಾರಿ ಕೇವಲ 150 ರೂ. ಬಿಡುಗಡೆ ಮಾಡಿದೆ. ಇದಕ್ಕೆ ಸಿಬ್ಬಂದಿಗಳು ಅಸಮಾಧಾನ ಹೊರಹಾಕಿದ್ದಾರೆ.
ಹಬ್ಬದ ದಿನಗಳಲ್ಲಿ ಹೂ-ಹಣ್ಣು, ಹಾರ ಎಲ್ಲದರ ಬೆಲೆಯೂ ಏರಿಕೆ ಆಗುವುದು ಸಾಮಾನ್ಯ. ಒಂದು ಮಾರು ಹೂವಿನ ಹಾರವೇ ಹಬ್ಬದಲ್ಲಿ 100 ರೂ. ದಾಟಲಿದೆ. ಕೇವಲ 150 ರೂಪಾಯಿಯಲ್ಲಿ ಒಂದು ವಾಹನಕ್ಕೆ ಪೂಜೆ ಮಾಡಲು ಸಾಧ್ಯವೇ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.
ವಿಭಾಗೀಯ ಕಾರ್ಯಾಗಾರಕ್ಕೆ 2000 ರೂ. ಹಾಗೂ ಪ್ರಾದೇಶಿಕ ಕಾರ್ಯಾಗಾರಕ್ಕೆ 4000 ರೂ. ಹಣವನ್ನು ಸಾರಿಗೆ ಇಲಾಖೆ ಬಿಡುಗಡೆ ಮಾಡಿದೆ. ರಾಜ್ಯದ ನಾಲ್ಕೂ ನಿಗಮಗಳಿಗೆ ಒಂದು ಬಸ್‌ಗೆ 150 ರೂ. ಸಿಗಲಿದೆ. ಸಿಬ್ಬಂದಿಯೇ ಹಣ ಹಾಕಿ ಹಬ್ಬ ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.