ಮುಂಬಯಿ: ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಘೋಷಿಸಿದ ಸಿಎಂ ಅಭ್ಯರ್ಥಿಯನ್ನು ವಿಧಾನಸಭೆ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮಾಜಿ ಸಿಎಂ ಉದ್ಧವ್ ಠಾಕ್ರೆ ರಾಜ್ಯ ಮಟ್ಟದಲ್ಲಿ ಶಿವಸೇನೆ ಆಯೋಜಿಸಿದ್ದ ವಜ್ರ ನಿರ್ಧಾರ್ ಪರಿಷತ್ತಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಗೆಲುವು ಸಾಧಿಸುವ ಮಹತ್ವವನ್ನು ಎತ್ತಿ ತೋರಿಸಿದರು. ಮೈತ್ರಿ ಪಾಲುದಾರರಿಗೆ ತಮ್ಮ ಬೆಂಬಲ ಘೋಷಿಸಿದರು. “ಕಾಂಗ್ರೆಸ್ ಅಥವಾ ಎನ್‌ಸಿಪಿ ಮುಖ್ಯಮಂತ್ರಿಯ ಅಭ್ಯರ್ಥಿ ಘೋಷಿಸಬೇಕು. ನಾನು ಅವರನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದಾರೆ.
ಉದ್ಧವ್ ಠಾಕ್ರೆ ಅವರು ಬಿಜೆಪಿಯನ್ನು ಕಟುವಾಗಿ ಟೀಕಿಸಿದರು. ಬಿಜೆಪಿ ನಾಯಕರು ಸಂವಿಧಾನವನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಇಡೀ ದೇಶದಲ್ಲಿ ಹೋರಾಟವನ್ನು ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹರಿಯಾಣ ಮತ್ತು ಕಾಶ್ಮೀರದಲ್ಲಿ ಬಂದಿರುವ ಫಲಿತಾಂಶಗಳನ್ನು ಗಮನಿಸಿದರೆ ಪ್ರತಿ ರಾಜ್ಯದ ಜನರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬುವುದು ಮತ್ತಷ್ಟು ಸ್ಪಷ್ಟವಾಗಿದೆ. ಗುಜರಾತಿ ಮತ್ತು ಮರಾಠಿ ನಡುವೆ ಎಂದಿಗೂ ಜಗಳ ನಡೆದಿಲ್ಲ. ದೆಹಲಿಯಲ್ಲಿ ಕುಳಿತ ಇಬ್ಬರು ಪುಂಡರು ಇಡೀ ದೇಶದಲ್ಲಿ ಹೋರಾಟ ಸೃಷ್ಟಿಸಿದ್ದಾರೆ ಎಂದು ಠಾಕ್ರೆ ಆರೋಪಿಸಿದ್ದಾರೆ.
ಬಿಜೆಪಿಯ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಘೋಷಣೆಯ ಬಗ್ಗೆಯೂ ಠಾಕ್ರೆ ವ್ಯಂಗ್ಯವಾಡಿದ್ದಾರೆ. “ಸಬ್ಕಾ ಸಾಥ್, ದೋಸ್ತ್ ಕಾ ವಿಕಾಸ್” ಎಂದು ಟೀಕಿಸಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಉಲ್ಲೇಖಿಸಿದ ಠಾಕ್ರೆ, “ಮಹಾರಾಷ್ಟ್ರವು ಲೋಕಸಭೆಯಲ್ಲಿ ಬಿಜೆಪಿಯನ್ನು ಮಂಡಿಯೂರುವಂತೆ ಮಾಡಿದೆ ಎಂದು ನಾವು ಹೆಮ್ಮೆಪಡುತ್ತೇವೆ” ಎಂದು ಹೇಳಿದ್ದಾರೆ.