ಬೆಂಗಳೂರು : ಆರ್ ಎಸ್ ಎಸ್ ಕಾರ್ಯಕ್ರಮಗಳಲ್ಲಿ ನಾವು ಎಲ್ಲದರಲ್ಲೂ ಭಾಗಿಯಾಗುತ್ತೇವೆ. ಇದು ಸ್ವತಂತ್ರ ದೇಶ, ವಾಕ್ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ ಎಲ್ಲವೂ ಇದೆ ಎಂದು ಬೆಂಗಳೂರಿನಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಚಿತ್ತಾಪುರ ಮತ್ತು ಗುರುಮಿಠಕಲ್ ನಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅವಕಾಶ ನಿರಾಕರಣೆ ವಿಚಾರ ಸಂಬಂಧಿಸಿದಂತೆ ಮಾತನಾಡಿದ ಬೊಮ್ಮಾಯಿ ಯಾರ್ಯಾರು ಪಥಸಂಚಲನ, ಮೆರವಣಿಗೆ ಮಾಡಿದರೂ ಎಲ್ಲರಿಗೂ ಅವಕಾಶ ಇದೆ. ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇರುವ ದೇಶ ನಮ್ಮದು. ಎಲ್ಲಾ ಸಂಘಟನೆಗಳಿಗೂ ಅವಕಾಶ ಕೊಡಬೇಕು ಎಂದು ಸರ್ಕಾರಕ್ಕೂ ಆಗ್ರಹಿಸುತ್ತೇವೆ ಎಂದು ಆಕ್ರೋಶಿಸಿದರು.
ಕೋರ್ಟ್ ಬಹಳ ಸರಿಯಾದ ನಡೆ ಮಾಡಿದೆ. ನವೆಂಬರ್ 2 ರಂದು ಪಥಸಂಚಲನ ಮಾಡಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಕೋರ್ಟ್ ಸರ್ಕಾರಕ್ಕೆ ಎಚ್ಚರಿಸಿದೆ. ಸರ್ಕಾರ ಅನಾವಶ್ಯಕವಾಗಿ ಸಮಾಜದಲ್ಲಿ ಕ್ಷೋಭೆ ಉಂಟು ಮಾಡುವ ಆದೇಶ ಮಾಡಿದಾಗ ಈ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂದು ಕಿಡಿಕಾರಿದ್ದಾರೆ.
ಇದು ಸಮಾಜದಲ್ಲಿ ಆರ್ ಎಸ್ ಎಸ್ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಹಾಗಾದರೆ ಮೊಹರಂ ಹಬ್ಬದಲ್ಲಿ ಚಾಟಿಯಿಂದ ಹೊಡೆದುಕೊಳ್ಳುವುದು ಸರಿಯಾ? ಸರ್ಕಾರಕ್ಕೆ ರಾಜ್ಯದಲ್ಲಿ ಮಾಡಲು ಬೇಕಾದಷ್ಟು ಕೆಲಸ ಇದೆ. ಸಾಕಷ್ಟು ಸಮಸ್ಯೆಗಳಿರುವಾಗ ಸಣ್ಣ ಪುಟ್ಟ ವಿಚಾರಗಳಿಗೆ ಮೂಗು ತೂರಿಸುವುದು ಸರ್ಕಾರದ ದಿವಾಳಿತನ ಎಂದು ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿ , ಡಾ. ಯತೀಂದ್ರ ಹೇಳಿಕೆ ವಿಚಾರ
ಯತೀಂದ್ರ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅದಕ್ಕೆ ಸಿಎಂ ತಮ್ಮದೇ ಆದ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಕೃಷ್ಣ ಬೈರೇಗೌಡ ಯಾವ ಕಾರಣಕ್ಕೆ ಸಚಿವ ಸ್ಥಾನ ತ್ಯಜಿಸುವ ಮಾತಾಡಿದ್ದಾರೋ ಗೊತ್ತಿಲ್ಲ. ಇಲ್ಲಿಯವರೆಗೂ ಕಾಂಗ್ರೆಸ್ ನಾಯಕರು ಎಲ್ಲವೂ ಹೈಕಮಾಂಡ್ ಅಂತಿಮ ಎನ್ನುತ್ತಿದ್ದರು. ಈಗ ಕಾಂಗ್ರೆಸ್ ಹೈಕಮಾಂಡ್ ಈಗ ದೆಹಲಿಯಲ್ಲಿದ್ಯಾ ಅಥವಾ ಕರ್ನಾಟಕದಲ್ಲಿದ್ಯಾ ಅಂತಾ ಕಾಂಗ್ರೆಸ್ ಗೇ ಸಂಶಯ ಬರುತ್ತಿದೆ. ಯಾವ ಹೈಕಮಾಂಡ್ ಅನ್ನು ಕಾಂಗ್ರೆಸ್ ನವರು ಪಾಲನೆ ಮಾಡಬೇಕು? ಯತೀಂದ್ರ ಅವರ ಹೈಕಮಾಂಡ್ ಮಾತಿಗೆ ಮನ್ನಣೆ ಕೊಡಬೇಕೋ ಅಥವಾ ದೆಹಲಿ ಹೈಕಮಾಂಡ್ ಮಾತಿಗೆ ಮನ್ನಣೆ ಕೊಡಬೇಕೋ ಎಂಬ ಹೊಸ ಪ್ರಶ್ನೆ ಉದ್ಭವಿಸಿದೆ ಎಂದಿದ್ದಾರೆ.



















