ಬೆಂಗಳೂರು : ದಾವಣಗೆರೆ ಜಿಲ್ಲಾ ಬಿಜೆಪಿ ವಿಚಾರದಲ್ಲಿ ಸಭೆ ಆದ ಬಳಿಕವೂ ಅನೇಕ ಅನಗತ್ಯ ಚರ್ಚೆಗಳಾದವು. ದೆಹಲಿಯಲ್ಲಿ ಪ್ರಹ್ಲಾದ್ ಜೋಷಿ, ವಿ. ಸೋಮಣ್ಣ ಓಂ ಪಾಠಕ್ ಅವರನ್ನು ಭೇಟಿ ಮಾಡಿದ್ದೇವೆ. ಇಂದು ಸದಾನಂದ ಗೌಡರನ್ನು ಭೇಟಿ ಮಾಡಿದ್ದೇವೆ. ನಾಲ್ಕು ಗೋಡೆ ಮಧ್ಯೆ ಏನು ಹೇಳಬೇಕೆನ್ನುವುದನ್ನು ಹೇಳಿದ್ದೇವೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಜುಲೈ ೪ ರಂದು ನಡೆದ ಸಭೆಯ ಬಳಿಕ ನಾವು ಎಲ್ಲೂ ಬಹಿರಂಗವಾಗಿ ಮಾತನಾಡಿಲ್ಲ. ಅನಗತ್ಯವಾಗಿ ಮಾತನಾಡಿರುವ ಬಗ್ಗೆ ಸದಾನಂದ ಗೌಡ ಸೇರಿ ಹಿರಿಯರ ಗಮನಕ್ಕೆ ತಂದಿದ್ದೇವೆ. ನಾವು ಬಿಜೆಪಿಯ ಕಟ್ಟಾಳುಗಳು. ವಿಜಯೇಂದ್ರ ಸಾರಥ್ಯದಲ್ಲಿ ಪಕ್ಷ ಹೋರಾಟ ಮಾಡುತ್ತಿದೆ. ಇನ್ನೂ ಅವಕಾಶ ಸಿಕ್ಕಿದರೆ ರಾಧಾಮೋಹನ್ ಅಗರವಾಲ್ ಅವರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.
ಯಾರು ಪಕ್ಷದ ಶಿಸ್ತು ಉಲ್ಲಂಘನೆ ಮಾಡುತ್ತಾರೋ ಅದನ್ನು ಗಮನ ಸೆಳೆಯುವ ಕೆಲಸ ಮಾಡುತ್ತೇವೆ. ಅನಗತ್ಯವಾಗಿ ನಾನು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿಲ್ಲ. ನನ್ನ ಮೇಲೆ ಯಾವ ತೂಗು ಕತ್ತಿ ಇಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ, ಮಾಡುವುದೂ ಇಲ್ಲ. ಯತ್ನಾಳ್ ಹೊಸ ಪಕ್ಷ ಕಟ್ಟಿದರೆ ಸ್ವಾಗತ ಮಾಡುತ್ತೇವೆ. ಅದು ಅವರ ವೈಯಕ್ತಿಕ ವಿಚಾರ. ಯತ್ನಾಳ್ ಈಗ ಪಕ್ಷದಿಂದ ಹೊರಗೆ ಹೋಗಿದ್ದಾರೆ. 224 ವಿಧಾನಸಭೆ ಕ್ಷೇತ್ರಗಳನ್ನೂ ಅಭ್ಯರ್ಥಿಗಳನ್ನು ಹುಡುಕಲಿ ಎಂದವರು ಹೇಳಿದ್ದಾರೆ.