ಉಡುಪಿ: ಇಂದು ರಾತ್ರಿ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದ್ದು, ಗ್ರಹಣವನ್ನು ಕಣ್ತುಂಬ ನೋಡಿ ಸಂಭ್ರಮಿಸಿ. ನಸುಗೆಂಪು ಚಂದ್ರ ಕಣ್ಣು, ಮನಸ್ಸಿಗೆ ಹಿತ ಕೊಡುತ್ತಾನೆ. ಬರಿಯ ಕಣ್ಣಿನಲ್ಲಿ ನೋಡಬಹುದು ಎಂದು ಹಿರಿಯ ಭೌತಶಾಸ್ತ್ರಜ್ಞ ಡಾ. ಎ.ಪಿ. ಭಟ್ ಕರೆ ಕೊಟ್ಟಿದ್ದಾರೆ.
ಇಂದು ಚಂದ್ರನಿಗೂ ಸಮುದ್ರದ ಅಲೆಗಳಿಗೂ ಸಂಬಂಧವಿದೆ. ಹೀಗಾಗಿ, ಸಮುದ್ರದಲ್ಲಿ ಕೊಂಚ ವ್ಯತ್ಯಾಸಗಳು ಸಂಭವಿಸಬಹುದು ಎಂದಿದ್ದಾರೆ. ಇದು ಪ್ರಕೃತಿಯ ಸುಂದರ ವಿದ್ಯಮಾನ, ಜನರು ನೋಡಿ ಆನಂದಿಸಬೇಕು. ಭಯಭೀತರಾಗುವುದು ಬೇಡ. ಪ್ರಕೃತಿಯಲ್ಲಿ ಹಲವಾರು ಏರಿಳಿತ ಇದ್ದೇ ಇರುತ್ತದೆ. ಹುಣ್ಣಿಮೆ ಅಮಾವಾಸ್ಯೆ ವೇಳೆ ಸಮುದ್ರದ ಅಲೆಯಲ್ಲಿ ವ್ಯತ್ಯಾಸ ಕಾಣುತ್ತದೆ. ಹುಣ್ಣಿಮೆಯನ್ನು ನಮ್ಮಲ್ಲಿ ಪವಿತ್ರ ದಿವಸ ಎನ್ನುತ್ತೇವೆ. ಹಾಲು ಬೆಳದಿಂಗಳಲ್ಲಿ ಕುಳಿತಾಗ ಮನಸ್ಸಿಗೆ ರಿಲ್ಯಾಕ್ಸ್ ಸಿಗುತ್ತದೆ. ಮನಸ್ಸಿಗೆ ಮುದ ಕೊಡುವಂತಹ ಕಾಲ. ಅದೇ ಪವಿತ್ರವಾದ ದಿವಸ ಎಂದು ತಿಳಿಸಿದ್ದಾರೆ.
ಭೂಮಿಯವರಿಗೆ ಚಂದ್ರ ಖುಷಿ ಕೊಡುತ್ತಿದ್ದಾನೆ. ಇದರಿಂದ ಅವರಿಗೆ ಇವರಿಗೆ ತೊಂದರೆ ಎಂದು ಹೆದರಬೇಕಾಗಿಲ್ಲ. ಗ್ರಹಣ ಕಾಲದಲ್ಲಿ ಹೊಸದೇನು ಆಗುವುದಿಲ್ಲ. ಇದು ನೆರಳು ಬೆಳಕಿನ ಆಟ ಎಂದು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದಾರೆ. ಇದರಲ್ಲಿ ಹೊಸದೇನು ಆಗುವುದಿಲ್ಲ. ಎಲ್ಲರೂ ನೋಡಿ ಆನಂದಿಸಿ ಎಂದು ಸಲಹೆ ನೀಡಿದ್ದಾರೆ.
ಪೂಜೆ, ಜಪ-ತಪ ಮಾಡುವವರು ಮಾಡಿ. ಮನಸ್ಸಿನ ಏಕಾಗ್ರತೆಗೆ ಒಳ್ಳೆಯ ಸಮಯ. ನಮಗೆ ಬೇಕು ಅಂದಾಗ ಸಿಗಲ್ಲ. ಪ್ರಕೃತಿ ವಿದ್ಯಮಾನವನ್ನು ಸಂಭ್ರಮಿಸಿ ಎಂದು ಕರೆ ಕೊಟ್ಟಿದ್ದಾರೆ.