ಬೆಂಗಳೂರು : 2026ರ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಶುಕ್ರಿ ಕಾನ್ರಾಡ್ ಅವರು ಅಧಿಕೃತ ಪ್ರಸಾರಕರಾದ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಕಾಲೆಳೆದಿದ್ದಾರೆ. ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಅಣಕಿಸುವ ಉದ್ದೇಶದಿಂದ ಸ್ಟಾರ್ ಸ್ಪೋರ್ಟ್ಸ್ ಪ್ರಸಾರ ಮಾಡಿದ್ದ ವಿವಾದಾತ್ಮಕ ‘ಕಪ್‌ಕೇಕ್’ ಜಾಹೀರಾತಿಗೆ ಕಾನ್ರಾಡ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ತಮ್ಮ ತಂಡವು ಆ ಜಾಹೀರಾತನ್ನು ಸಖತ್ತಾಗಿ ಆನಂದಿಸಿದೆ ಎಂದು ವ್ಯಂಗ್ಯವಾಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಮಹತ್ವದ ಸೆಮಿಫೈನಲ್ ಕದನಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಜಾಹೀರಾತಿನ ಕುರಿತು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿಯು ದಕ್ಷಿಣ ಆಫ್ರಿಕಾ ತಂಡವು ಐಸಿಸಿ ಟೂರ್ನಿಗಳಲ್ಲಿ ಟ್ರೋಫಿ ಗೆಲ್ಲದೆ ಕೊನೆಯ ಹಂತದಲ್ಲಿ ಮುಗ್ಗರಿಸುವ (ಚೋಕರ್ಸ್) ಇತಿಹಾಸವನ್ನು ಗುರಿಯಾಗಿಸಿಕೊಂಡು ಅತ್ಯಂತ ಕೀಳುಮಟ್ಟದ ಜಾಹೀರಾತೊಂದನ್ನು ಪ್ರಸಾರ ಮಾಡಿತ್ತು. ಆ ಜಾಹೀರಾತಿನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾದ ಅಭಿಮಾನಿಗಳು ಪೇಸ್ಟ್ರಿಗಾಗಿ ಮುಗಿಬೀಳುವ ದೃಶ್ಯವಿತ್ತು. ದಕ್ಷಿಣ ಆಫ್ರಿಕಾದ ಅಭಿಮಾನಿ ಆ ಪೇಸ್ಟ್ರಿಯನ್ನು ಪಡೆದುಕೊಂಡಾಗ, ಭಾರತೀಯ ಅಭಿಮಾನಿಯು ಆತನನ್ನು ಹಂಗಿಸುತ್ತಾ, ನೀವು ಈ ಕಪ್‌ಕೇಕ್ ತಿಂದೇ ಖುಷಿಪಡಬೇಕು, ಏಕೆಂದರೆ ಅಸಲಿ ಟ್ರೋಫಿ ಗೆಲ್ಲುವ ತಾಕತ್ತು ನಿಮಗಿಲ್ಲ ಎಂದು ವ್ಯಂಗ್ಯವಾಡಿದ್ದನು.
ಆದರೆ, ಈ ಜಾಹೀರಾತು ಪ್ರಸಾರವಾದ ಬೆನ್ನಲ್ಲೇ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಭಾರತವನ್ನು ಹೀನಾಯವಾಗಿ ಸೋಲಿಸಿತ್ತು. ಭಾರತೀಯರು ಸೇರಿದಂತೆ ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳಿಂದ ವಾಹಿನಿಯ ಈ ಸಂಕುಚಿತ ಮನಸ್ಥಿತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಮುಜುಗರಕ್ಕೀಡಾದ ಸ್ಟಾರ್ ಸ್ಪೋರ್ಟ್ಸ್ ಆ ಜಾಹೀರಾತನ್ನು ತನ್ನೆಲ್ಲಾ ಪ್ಲಾಟ್‌ಫಾರ್ಮ್‌ಗಳಿಂದ ಅಳಿಸಿಹಾಕಿತ್ತು.
ಸೂಪರ್ 8 ಹಂತದ ಅಂತಿಮ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಗೆಲುವು ಸಾಧಿಸಿದ ನಂತರ ಮಾತನಾಡಿದ ಶುಕ್ರಿ ಕಾನ್ರಾಡ್, ಒತ್ತಡವನ್ನು ನಿಭಾಯಿಸುವ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು. ದೊಡ್ಡ ಟೂರ್ನಿಗಳಲ್ಲಿ ಯಾವಾಗಲೂ ಒತ್ತಡ ಇದ್ದೇ ಇರುತ್ತದೆ, ಆದರೆ ಆ ಒತ್ತಡವನ್ನು ನಾವು ಹೇಗೆ ಮೆಟ್ಟಿ ನಿಲ್ಲುತ್ತೇವೆ ಎಂಬುದು ಮುಖ್ಯವಾಗುತ್ತದೆ ಎಂದಿದ್ದಾರೆ. ಇದೇ ವೇಳೆ ‘ಸಿ’ (ಚೋಕರ್ಸ್) ಪದದ ಬಗ್ಗೆ ಮಾತನಾಡಿದ ಅವರು, ಅದಕ್ಕೆ ಪರ್ಯಾಯವಾಗಿ ‘ಕಪ್‌ಕೇಕ್’ ಎಂಬ ಪದವನ್ನು ಬಳಸಲಾಗಿದೆ, ಆದರೆ ನಮ್ಮ ತಂಡ ಆ ಜಾಹೀರಾತನ್ನು ನೋಡಿ ಬೇಸರಪಟ್ಟುಕೊಳ್ಳುವ ಬದಲು ಅದನ್ನು ಬಹಳವಾಗಿ ಆನಂದಿಸಿದೆ ಎಂದು ಪರೋಕ್ಷವಾಗಿ ವಾಹಿನಿಗೆ ಟಾಂಗ್ ನೀಡಿದ್ದಾರೆ.
ಪ್ರಸಕ್ತ ಟೂರ್ನಿಯಲ್ಲಿ ಇಲ್ಲಿಯವರೆಗೆ ಅಜೇಯವಾಗಿ ಉಳಿದಿರುವ ಏಕೈಕ ತಂಡವಾಗಿರುವ ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಭಾರತ ಮತ್ತು ವೆಸ್ಟ್ ಇಂಡೀಸ್‌ನಂತಹ ಬಲಿಷ್ಠ ತಂಡಗಳನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ. ಇದೀಗ ಮಾರ್ಚ್ ೪ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ.
ಯಾವುದೇ ಒತ್ತಡವಿಲ್ಲ
ತಮ್ಮ ತಂಡವು ಟೂರ್ನಿಯ ಫೇವರಿಟ್ ಆಗಿ ಕಣಕ್ಕಿಳಿಯುತ್ತಿರುವುದರ ಬಗ್ಗೆ ಯಾವುದೇ ಹೆಚ್ಚುವರಿ ಒತ್ತಡವಿಲ್ಲ ಎಂದು ಕಾನ್ರಾಡ್ ಸ್ಪಷ್ಟಪಡಿಸಿದ್ದಾರೆ. ನ್ಯೂಜಿಲೆಂಡ್‌ನಂತಹ ಬಲಿಷ್ಠ ತಂಡವನ್ನು ಸೆಮಿಫೈನಲ್‌ನಲ್ಲಿ ಎದುರಿಸುವುದೇ ಒಂದು ದೊಡ್ಡ ಸವಾಲಾಗಿರುತ್ತದೆ. ಹಾಗಾಗಿ ಫೇವರಿಟ್ ಎಂಬ ಹಣೆಪಟ್ಟಿ ಮತ್ತಷ್ಟು ಹೊರೆಯಾಗುವುದಿಲ್ಲ. ಬದಲಾಗಿ, ಅಂಡರ್‌ಡಾಗ್ ಆಗಿ ಆಡುವುದಕ್ಕಿಂತ ಫೇವರಿಟ್ ಆಗಿ ಕಣಕ್ಕಿಳಿಯುವುದೇ ಸುಲಭ ಹಾಗೂ ಹೆಮ್ಮೆಯ ವಿಚಾರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ತಂಡವು ಇಲ್ಲಿಯವರೆಗೆ ತೋರಿರುವ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದರೆ, ಮಾರ್ಚ್ ೮ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯವನ್ನು ತಲುಪುವುದು ನಿಶ್ಚಿತ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಟೂರ್ನಿಯ ಬಹುಪಾಲು ಪಂದ್ಯಗಳನ್ನು ಅಹಮದಾಬಾದ್‌ನಲ್ಲೇ ಆಡಿರುವ ಕಾರಣ ಅಲ್ಲಿನ ಪರಿಸ್ಥಿತಿಗಳು ತಂಡಕ್ಕೆ ಚೆನ್ನಾಗಿ ತಿಳಿದಿವೆ. ಈ ಬಗ್ಗೆ ತಮಾಷೆ ಮಾಡಿರುವ ಕಾನ್ರಾಡ್, ಬುಧವಾರದ ಸೆಮಿಫೈನಲ್‌ನಲ್ಲಿ ಗೆದ್ದು, ನಮ್ಮ ‘ತವರು ಮೈದಾನ’ವಾದ ಅಹಮದಾಬಾದ್‌ನಲ್ಲಿ ಫೈನಲ್ ಆಡುವ ಭರವಸೆ ಇದೆ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ.
ಇದನ್ನೂ ಓದಿ : ಹೆಬ್ಬಗೋಡಿ ಪೊಲೀಸರ ಭರ್ಜರಿ ಕಾರ್ಯಾಚರಣೆ | ಕುಖ್ಯಾತ ಮನೆಗಳ್ಳ ಸೇರಿ ಮೂವರ ಬಂಧನ



















