ಢಾಕಾ: ಬಾಂಗ್ಲಾದೇಶದ ಯುವ ನಾಯಕನೊಬ್ಬ ಹಿಂದೂ ಪೊಲೀಸ್ ಅಧಿಕಾರಿಯೊಬ್ಬರನ್ನು ಸಜೀವ ದಹನ ಮಾಡಿರುವುದಾಗಿ ಹೆಮ್ಮೆಯಿಂದ ಹೇಳಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಹೇಳಿಕೆಯಿಂದ ಹಬಿಗಂಜ್ ಜಿಲ್ಲೆಯ 2024ರ ಆಗಸ್ಟ್‌ನಲ್ಲಿ ನಡೆದ ಹಿಂಸಾಚಾರ ಹಾಗೂ ಉಪನಿರೀಕ್ಷಕ ಸಂತೋಷ್ ಭಭು ಅವರ ಕ್ರೂರ ಹತ್ಯೆಯ ಘಟನೆ ಮತ್ತೆ ಚರ್ಚೆಗೆ ಬಂದಿದೆ.
ಸಹೀದುಲ್ ಹಸನ್ ಖೋಕೋನ್ ಎಂಬ ತನಿಖಾ ಪತ್ರಕರ್ತರು “ಎಕ್ಸ್” (ಹಿಂದಿನ ಟ್ವಿಟರ್) ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಹಬಿಗಂಜ್ ಜಿಲ್ಲೆಯ ವಿದ್ಯಾರ್ಥಿ ಸಂಯೋಜಕನನ್ನೇ ವದಂತಿಯ ವಕ್ತಾರ ಎಂದು ಗುರುತಿಸಿದ್ದಾರೆ. ವಿಡಿಯೋದಲ್ಲಿ ಆ ಯುವಕ ಸ್ಥಳೀಯ ಠಾಣಾಧಿಕಾರಿಯನ್ನು ಬೆದರಿಸುತ್ತಾ, “ನಾವು ಹಿಂದೆ ಬನಿಯಾಚಾಂಗ್ ಠಾಣೆಗೆ ಬೆಂಕಿ ಹಚ್ಚಿದ್ದೇವೆ, ಇನ್ನೊಮ್ಮೆ ಸುಡಲು ಸಿದ್ಧರಿದ್ದೇವೆ,” ಎಂದು ಹೇಳುತ್ತಿದ್ದಾನೆ.
ಇದರ ಮಧ್ಯೆ ಆತ ಅತ್ಯಂತ ಅಮಾನವೀಯ ಹೇಳಿಕೆ ನೀಡುತ್ತಾ, “ನಾವು ಹಿಂದೂ ಅಧಿಕಾರಿ ಸಂತೋಷ್‌ರನ್ನು ಬೆಂಕಿ ಹಚ್ಚಿ, ಸುಟ್ಟು ಹಾಕಿದೆವು,” ಎಂದೂ ಹೇಳುತ್ತಾನೆ. ಪೊಲೀಸರ ಎದುರೇ ಆತ ಈ ಮಾತುಗಳನ್ನು ಆಡುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿದೆ.
2024ರ ಆಗಸ್ಟ್ 5ರಂದು ಹಬಿಗಂಜ್ ಜಿಲ್ಲೆಯ ಬನಿಯಾಚಾಂಗ್ ಪೊಲೀಸ್ ಠಾಣೆಯ ಉಪನಿರೀಕ್ಷಕ ಸಂತೋಷ್ ಭಭು ಅವರನ್ನು ಜನರ ಗುಂಪೊಂದು ಹತ್ಯೆ ಮಾಡಿತ್ತು. ಆ ದಿನ ಸಂಜೆ ರಾಜಕೀಯ ಅಶಾಂತಿಯ ನಡುವೆ ಗುಂಪೊಂದು ಠಾಣೆಯ ಮೇಲೆ ದಾಳಿ ನಡೆಸಿತ್ತು. ಪೊಲೀಸರು ಆತ್ಮರಕ್ಷಣೆಯ ಸಲುವಾಗಿ ಗುಂಡು ಹಾರಿಸಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ರಾತ್ರಿ ಮತ್ತೆ ಆಗಮಿಸಿದ ಜನರ ಗುಂಪು, ಸಂತೋಷ್ ಭಭು ಅವರನ್ನು ಹೊತ್ತೊಯ್ದು, ಅಮಾನವೀಯವಾಗಿ ಕೊಂದು ಹಾಕಿತ್ತು. ಬಳಿಕ ಅವರ ಶವವನ್ನು ರಸ್ತೆಯಲ್ಲೇ ಬಿಟ್ಟು ಹೋಗಲಾಗಿತ್ತು.
ಇದನ್ನೂ ಓದಿ: ಮಹಾರಾಷ್ಟ್ರ ನಗರಸಭೆ ಚುನಾವಣೆ | ಮತ ಚಲಾವಣೆಯಾಗದೇ 66 ಸ್ಥಾನಗಳಲ್ಲಿ ಬಿಜೆಪಿ-ಶಿವಸೇನೆ ಗೆಲುವು



















