ಬೆಂಗಳೂರು: ಕರ್ನಾಟಕ ಸರ್ಕಾರ ನಡೆಸುತ್ತಿರುವುದು ಜಾತಿಗಣತಿನಾ ಎಂಬುವುದಕ್ಕೆ ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ತಂಗಡಗಿ, ನಮ್ಮ ಸರ್ಕಾರ ನಡೆಸುತ್ತಿರುವುದು ಜಾತಿಗಣತಿ ಅಲ್ಲ. ಶೈಕಣಿಕ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ನಡೆಸುತ್ತಿದೆ. ಜಾತಿಗಣತಿ ಮಾಡುವ ಪವರ್ ರಾಜ್ಯಕ್ಕಿಲ್ಲ, ಕೇಂದ್ರ ಸರ್ಕಾರಕ್ಕಿದೆ ಎಂದು ನಾವು ಸ್ಪಷ್ಟವಾಗಿ ಆದೇಶ ಹೊರಡಿಸಿದ್ದೇವೆ. .22ರಿಂದ ಅಕ್ಟೋಬರ್ 7ರವರೆಗೆ ಸಮೀಕ್ಷೆ ನಡೆಯಲಿದೆ. ಮನೆಗೆ, ಮನೆಗೆ ಹೋಗಿ ಸಮೀಕ್ಷೆ ಮಾಡುತ್ತಾರೆ. ದಯಮಾಡಿ ಗಣತಿಗೆ ಬಂದವರಿಗೆ ಎಲ್ಲಾ ಮಾಹಿತಿ ನೀಡಿ ಎಂದು ರಾಜ್ಯದ ಜನತೆಗೆ ಸಚಿವ ತಂಗಡಗಿ ಮನವಿ ಮಾಡಿದ್ದಾರೆ.
ಇದೇ ವೇಳೆ ಕ್ರಿಶ್ಚಿಯನ್ ಜೊತೆ ಸೇರಿದ ಜಾತಿಗಳ ಬಗ್ಗೆ ಪ್ರತಿಕ್ರಿಯಿಸಿದ ತಂಗಡಗಿ ಈ ಬಗ್ಗೆ ಚರ್ಚೆಯಾಗಿದ್ದು ನಾವು ಆಯೋಗಕ್ಕೆ ಕೆಲವು ಸೂಚನೆ ಕೊಡಬಹುದು. ಆದರೆ ಆಯೋಗದ ಮೇಲೆ ಒತ್ತಡ ಹೇರುವುದಕ್ಕೆ ಆಗುವುದಿಲ್ಲ. ಸಿಎಂ ಕೂಡ ಹೀಗೆ ಮಾಡಿ ಎಂದು ಆಯೋಗದ ಮೇಲೆ ಒತ್ತಡ ಹಾಕಲು ಬರುವುದಿಲ್ಲ. ಕೆಲವು ಸಾಧಕಬಾದಕಗಳ ಬಗ್ಗೆ ಚರ್ಚೆಯಾಗಿದೆ, ಸಲಹೆ ನೀಡಲಾಗಿದೆ. ಜನರು ಹೇಳಿದ ಜಾತಿಯನ್ನು ಪಟ್ಟಿ ಮಾಡಲಾಗಿದೆ. ನಾನು, ಸಿಎಂ ಅಥವಾ ಡಿಸಿಎಂ ಡಿಕೆಶಿ ಯಾರೂ ಸಹ ಪಟ್ಟಿ ಮಾಡಿ ಕೊಟ್ಟಿಲ್ಲ. ಆಯೋಗ ಸಹ ಪಟ್ಟಿ ಮಾಡಿಲ್ಲ, ಜನರು ಬರೆದಿದ್ದನ್ನು ಆಯೋಗ ಪಟ್ಟಿಯಲ್ಲಿ ಸೇರಿಸಿದೆ. ಜನರಲ್ಲಿ ಭಾವನೆ ಏನಿದೆಯೋ ಅದನ್ನು ಬರೆಯಲಿ, ಇದರ ಬಗ್ಗೆ ಬಿಜೆಪಿಯವರಿಗೆ ಏನೂ ಗೊತ್ತಿಲ್ಲ, ಅವರಿಗೆ ಜಾತಿ , ಮಸೀದಿ ಕಂಡ್ರೆ ಪ್ರೀತಿ, ಮುಸ್ಲಿಂ ಕಂಡ್ರೆ ಇನ್ನು ಜಾಸ್ತಿ ಪ್ರೀತಿ.ಅಭಿವೃದ್ಧಿ ಬಗ್ಗೆ ಅವರು ಮಾತನಾಡುವುದಿಲ್ಲಎಂದು ಹೇಳಿದ್ದಾರೆ.
ಜಾತಿ ವಿಚಾರದಲ್ಲಿ ನಾವು ಹೇಳಿದ್ದು ಫೈನಲ್ ಅಲ್ಲ, ಆಯೋಗ ಮೊದಲು ವರದಿ ಕೊಡಲಿ, ಇದರ ಬಗ್ಗೆ ಸರ್ಕಾರ ಸಂಪುಟದಲ್ಲಿ ತೀರ್ಮಾನ ಮಾಡುತ್ತದೆ. ಜನರು ಏನು ಬೇಕಾದರೂ ಬರೆಸಲಿ, ಎಲ್ಲಾ ಸಮಾಜದವರು ಇದರ ಬಗ್ಗೆ ಸಭೆ ಮಾಡುತ್ತಿದ್ದಾರೆ. ಎಲ್ಲರೂ ಅರಿವು ಮೂಡಿಸುತ್ತಿದ್ದಾರೆ. ಆದರೆ ಕೊನೆಯದಾಗಿ ಜನರು ಏನನ್ನು ಬರೆಸಬೇಕು ಎಂಬುವುದನ್ನು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದ್ದಾರೆ.