ಬೆಂಗಳೂರು: ನಾವು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೇವೆ. ನಾವೇನು ಹುಡುಗಾಟ ಮಾಡುತ್ತೇವಾ? ಅಪಾದಿತರ ಸ್ಥಾನದಲ್ಲಿ ನಿಲ್ಲಿಸಿದರೆ ನಮಗೆ ಬೇಜಾರಾಗುವುದಿಲ್ಲವೇ? ನಾನಾಗಲಿ, ಸತೀಶ್ ಜಾರಕಿಹೊಳಿ ಮತ್ತು ಮಹದೇವಪ್ಪ ಸೇರಿದಂತೆ ಯಾರೂ ಸಿಎಂ ಸ್ಧಾನದ ಕುರಿತು ಚರ್ಚಿಸಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ವರ್ಷ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ. ಮೈಸೂರಿನಲ್ಲಿಯೂ ಇದೇ ಮಾತನ್ನು ಹೇಳಿದ್ದೇನೆ. ನಾವು ಯಾರು ಸಹ ಮುಖ್ಯಮಂತ್ರಿಯನ್ನು ಬದಲಾಯಿಸಿ, ಬೇರೆಯವರನ್ನು ಮಾಡಿ ಎಂದು ಹೇಳಿಲ್ಲ ಎಂದಿದ್ದಾರೆ.
ಮುಂದೆ ನಾನು ವೈಯಕ್ತಿಕವಾಗಿ ಮುಖ್ಯಮಂತ್ರಿ ವಿಚಾರದಲ್ಲಿ ನೀವು ಕೇಳಿದರು ಪ್ರತಿಕ್ರಿಯಿಸುವುದಿಲ್ಲ. ಕೆಲವು ವಿಚಾರಗಳಲ್ಲಿ ಅಗತ್ಯ ಇದ್ದರೆ ಭೇಟಿ ಮಾಡುತ್ತೇವೆ. ಅನವಶ್ಯಕವಾಗಿ ಡಿನ್ನರ್ ಮೀಟಿಂಗ್, ರಾಜಕೀಯ ಸಭೆಗಳನ್ನು ನಾವು ಇಲ್ಲಿಯವರೆಗೂ ಮಾಡಿಲ್ಲ ಎಂದಿದ್ದಾರೆ.
ವಿಪಕ್ಷ ನಾಯಕ ಆರ್.ಅಶೋಕ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ಧಗಂಗಾ ಮಠಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ಇತ್ತೀಚೆಗೆ ನಾನು ಮಠಕ್ಕೆ ಹೋಗೇ ಇಲ್ಲ. ಸಿದ್ಧಗಂಗಾ ಮಠಕ್ಕೆ ಹೋದರೆ ಸ್ವಾಮೀಜಿಯವರ ಗದ್ದುಗೆಗೆ ಮತ್ತು ಸಿದ್ಧಲಿಂಗ ಸ್ವಾಮೀಜಿಯವರಿಗೆ ನಮಸ್ಕರಿಸಿ ಬರುತ್ತೇನೆ ಎಂದಿದ್ದಾರೆ.
ಬಿಜೆಪಿ ಆಡಳಿತದಲ್ಲಿ ನಡೆದ ಹಗರಣಗಳ ತನಿಖೆ, ಕೆಲವು ಕೊನೆ ಹಂತದಲ್ಲಿವೆ. ಪೂರ್ಣಗೊಂಡ ನಂತರ ವರದಿ ಸಲ್ಲಿಸಬೇಕಾಗುತ್ತದೆ. ಬೇರೆ ಬೇರೆ ಸಂದರ್ಭದಲ್ಲಿ ಆಗಿರುವ ಪ್ರಕರಣಗಳು ಇವೆ. ಎಲ್ಲ ಪ್ರಕರಣಗಳನ್ನು ತಾರ್ಕಿಕ ಅಂತ್ಯ ಮುಟ್ಟಿಸುತ್ತೇವೆ ಎಂದಿದ್ದಾರೆ.