ಇಂದೋರ್: ತಾಯಿಯ ಎದೆಯಲ್ಲಿ ಹಾಲು ಬರುತ್ತಿರಲಿಲ್ಲ. ಹೀಗಾಗಿ, ವೈದ್ಯರ ಸಲಹೆಯಂತೆ ಮಗುವಿಗೆ ಪ್ಯಾಕೆಟ್ ಹಾಲಿಗೆ ಸ್ವಲ್ಪ ನೀರು ಬೆರೆಸಿ ಕುಡಿಸಲಾಗಿತ್ತು. ಆದರೆ, ಆ ಕುಟುಂಬ ನಂಬಿದ್ದ ನಲ್ಲಿ ನೀರೇ ಆ ಮಗುವಿಗೆ ‘ವಿಷ’ವಾಗಿ ಪರಿಣಮಿಸಿದೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಯಿಂದ ಉಂಟಾದ ದುರಂತಕ್ಕೆ 5 ತಿಂಗಳ ಮಗು ‘ಅವ್ಯಾನ್’ ಬಲಿಯಾಗಿದ್ದಾನೆ.
ಇಂದೋರ್‌ನ ಭಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರು ಸೇವನೆಯಿಂದ ಈಗಾಗಲೇ 11ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಅವ್ಯಾನ್ ಸಾವು ಈ ಸರಣಿ ದುರಂತದ ಮನಕಲಕುವ ಅಧ್ಯಾಯವಾಗಿದೆ.
10 ವರ್ಷಗಳ ತಪಸ್ಸು ವ್ಯರ್ಥವಾಯಿತು
ಸುನಿಲ್ ಸಾಹು ಮತ್ತು ಅವರ ಪತ್ನಿ ಮಗುವಿಗಾಗಿ ಹತ್ತು ವರ್ಷಗಳ ಕಾಲ ಕಾದಿದ್ದರು. 10 ವರ್ಷಗಳ ಹಿಂದೆ ಜನಿಸಿದ ಮಗಳು ಕಿಂಜಲ್ ನಂತರ, ಕಳೆದ ಜುಲೈ 8 ರಂದು ಅವರಿಗೆ ಗಂಡು ಮಗು ಜನಿಸಿತ್ತು. “ದೇವರು 10 ವರ್ಷಗಳ ನಂತರ ಸಂತೋಷವನ್ನು ಕೊಟ್ಟಿದ್ದ, ಆದರೆ ಈಗ ಅವನೇ ಅದನ್ನು ಕಿತ್ತುಕೊಂಡ,” ಎಂದು ಮಗುವಿನ ಅಜ್ಜಿ ಕಣ್ಣೀರು ಹಾಕುತ್ತಿದ್ದಾರೆ.
ತಾಯಿಗೆ ಎದೆಹಾಲು ಇಲ್ಲದ ಕಾರಣ, ವೈದ್ಯರ ಸಲಹೆಯ ಮೇರೆಗೆ ಮಗುವಿಗೆ ಪ್ಯಾಕೆಟ್ ಹಾಲನ್ನು ನೀಡಲಾಗುತ್ತಿತ್ತು. ಅದಕ್ಕೆ ನಲ್ಲಿಯ ನೀರನ್ನು (ನರ್ಮದಾ ನೀರು) ಬೆರೆಸಲಾಗುತ್ತಿತ್ತು. ಕುಟುಂಬದವರು ನೀರನ್ನು ಸೋಸಿ, ಹರಳು ಹಾಕಿ ಶುದ್ಧೀಕರಿಸುವ ಪ್ರಯತ್ನ ಮಾಡಿದ್ದರೂ, ನೀರಿನಲ್ಲಿದ್ದ ವಿಷಕಾರಿ ಅಂಶ ಮಗುವಿನ ಪ್ರಾಣಕ್ಕೆ ಕುತ್ತಾಗಿದೆ.
ಎರಡು ದಿನಗಳ ಜ್ವರ ಮತ್ತು ಸಾವು
ಮಗು ಆರೋಗ್ಯವಾಗಿಯೇ ಇತ್ತು. ಆದರೆ ಎರಡು ದಿನಗಳ ಹಿಂದೆ ಅವ್ಯಾನ್‌ನಿಗೆ ಜ್ವರ ಮತ್ತು ಭೇದಿ ಕಾಣಿಸಿಕೊಂಡಿದೆ. ಕೂಡಲೇ ವೈದ್ಯರ ಬಳಿ ತೋರಿಸಿ ಔಷಧ ನೀಡಿದರೂ ಪರಿಸ್ಥಿತಿ ಸುಧಾರಿಸಲಿಲ್ಲ. ಭಾನುವಾರ ರಾತ್ರಿ ಮಗುವಿನ ಸ್ಥಿತಿ ಗಂಭೀರವಾಗಿದ್ದು, ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲೇ ಮಗು ಕೊನೆಯುಸಿರೆಳೆದಿದೆ.
“ನಮ್ಮ ಮಗುವಿಗೆ ಕೊಟ್ಟ ಹಾಲಿಗೆ ಬೆರೆಸಿದ ನೀರೇ ಅವನನ್ನು ಕೊಂದಿದೆ ಎಂದು ನಾನು ನಂಬುತ್ತೇನೆ. ನರ್ಮದಾ ನಲ್ಲಿ ನೀರು ಇಷ್ಟು ಕಲುಷಿತವಾಗಿದೆ ಎಂದು ನಾವು ಊಹಿಸಿರಲಿಲ್ಲ. ಇಲ್ಲಿನ ಜನ ಹೇಳುವವರೆಗೂ ನಮಗೆ ನೀರಿನ ಸಮಸ್ಯೆ ಬಗ್ಗೆ ಗೊತ್ತೇ ಇರಲಿಲ್ಲ. ಯಾವುದೇ ಮುನ್ನೆಚ್ಚರಿಕೆಯನ್ನೂ ನಮಗೆ ನೀಡಿರಲಿಲ್ಲ,” ಎಂದು ಮಗುವಿನ ತಂದೆ ಸುನಿಲ್ ಸಾಹು ಅಳಲು ತೋಡಿಕೊಂಡಿದ್ದಾರೆ.
ಸ್ವಚ್ಛ ನಗರಿ ಎಂದು ಕರೆಸಿಕೊಳ್ಳುವ ಇಂದೋರ್‌ನಲ್ಲಿ, ಕುಡಿಯುವ ನೀರು ಕಲುಷಿತಗೊಂಡು ಸಾಲು ಸಾಲು ಸಾವುಗಳು ಸಂಭವಿಸುತ್ತಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ.
ಇದನ್ನೂ ಓದಿ: ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ ಮಾಡಿದ್ದ ಇಬ್ಬರ ಬಂಧನ!



















