ನವದೆಹಲಿ: ಖ್ಯಾತ ನಟ ರಾಮ್‌ಚರಣ್ ಅವರ ನಿರ್ಮಾಣದ ಮುಂಬರುವ ಸಿನಿಮಾ “ದಿ ಇಂಡಿಯಾ ಹೌಸ್”ನ ಸೆಟ್ ನಲ್ಲಿ ಭಾರೀ ಅವಘಡವೊಂದು ಸಂಭವಿಸಿದೆ. ಹೈದರಾಬಾದ್‌ನ ಶಂಶಾಬಾದ್‌ನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗಲೇ ನೀರಿನ ಟ್ಯಾಂಕ್ ಸ್ಫೋಟಗೊಂಡು, ಸೆಟ್ ಪೂರ್ತಿ ಮುಳುಗಡೆಯಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ದಿ ಇಂಡಿಯಾ ಹೌಸ್ ಚಿತ್ರದಲ್ಲಿ ತೆಲುಗು ನಟ ನಿಖಿಲ್ ಸಿದ್ಧಾರ್ಥ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ದುರಂತದ ವೇಳೆ ಅವರು ಸ್ಥಳದಲ್ಲಿ ಇದ್ದರೋ, ಇಲ್ಲವೋ ಎನ್ನುವುದು ಸ್ಪಷ್ಟಪಟ್ಟಿಲ್ಲ. ಸೆಟ್ ಪೂರ್ತಿ ಪ್ರವಾಹ ಆವರಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಶಂಶಾಬಾದ್‌ನಲ್ಲಿ ಸಮುದ್ರದ ಹಿನ್ನೆಲೆಯಿರುವಂತೆ ಸೆಟ್ ಹಾಕಲಾಗಿತ್ತು. ಆ್ಯಕ್ಷನ್ ದೃಶ್ಯವೊಂದರ ಶೂಟಿಂಗ್ ನಡೆಸಲಾಗುತ್ತಿತ್ತು. ಈ ದೃಶ್ಯಕ್ಕೆ ಭಾರೀ ಪ್ರಮಾಣದ ನೀರಿನ ಅವಶ್ಯಕತೆಯಿತ್ತು. ಹೀಗಾಗಿ, ವಾಟರ್ ಟ್ಯಾಂಕ್ ಅನ್ನು ಬಳಸಲಾಗುತ್ತಿತ್ತು. ಇದೇ ಸಮಯದಲ್ಲಿ ಏಕಾಏಕಿ ಟ್ಯಾಂಕ್ ಸ್ಫೋಟಗೊಂಡಿದ್ದು, ಸಾವಿರಾರು ಲೀಟರ್ ನೀರು ಏಕಾಏಕಿ ಹರಿದು ಸೆಟ್ ಪೂರ್ತಿ ಆವರಿಸಿತು.
ಅನಿರೀಕ್ಷಿತ ಅವಘಡದಿಂದಾಗಿ ಸೆಟ್ ನಲ್ಲಿದ್ದ ಹಲವು ವಸ್ತುಗಳು ಜಲಾವೃತವಾದವು. ಇದರ ಮಧ್ಯೆಯೂ ಸಿಬ್ಬಂದಿಯು ಕ್ಯಾಮೆರಾ ಸೇರಿದಂತೆ ಕೆಲವೊಂದು ಸಾಧನಗಳನ್ನು ರಕ್ಷಿಸಲು ಯತ್ನಿಸಿದರು. ಘಟನೆಯಲ್ಲಿ ಸಹಾಯಕ ಸಿನೆಮಾಟೋಗ್ರಾಫರ್ ಮತ್ತು ಕೆಲವು ಸಿಬ್ಬಂದಿಗಳು ಗಾಯಗೊಂಡರು ಎಂದು ಮೂಲಗಳು ತಿಳಿಸಿವೆ.
ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ವೇಳೆ ರಾಮ್ ಚರಣ್ ಅವರೂ ಸ್ಥಳದಲ್ಲಿದ್ದರೇ ಎಂಬುದೂ ಗೊತ್ತಾಗಿಲ್ಲ. ಸದ್ಯಕ್ಕೆ ಸಿನಿಮಾ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.

2023ರಲ್ಲಿ ರಾಮ್ ಚರಣ್ ಅವರು ತಮ್ಮ ಚೊಚ್ಚಲ ನಿರ್ಮಾಣದ ಚಿತ್ರವಾದ ದಿ ಇಂಡಿಯಾ ಹೌಸ್ ಬಗ್ಗೆ ಘೋಷಿಸಿದ್ದರು. ನಿಖಿಲ್ ಸಿದ್ಧಾರ್ಥ ಹಾಗೂ ಅನುಪಮ್ ಖೇರ್ ಅವರನ್ನೊಳಗೊಂಡ ಪ್ರೋಮೋ ಕೂಡ ಬಿಡುಗಡೆ ಮಾಡಿದ್ದರು. ದಿ ಇಂಡಿಯಾ ಹೌಸ್ ಮೂಲಕ ರಾಮ್ ವಂಶಿ ಕೃಷ್ಣ ಅವರು ಮೊದಲ ಬಾರಿಗೆ ನಿರ್ದೇಶಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ 140ನೇ ಜನ್ಮದಿನದಂದು ರಾಮ್ ಚರಣ್ ಅವರು ತಮ್ಮ ನಿರ್ದೇಶನದ ಚೊಚ್ಚಲ ಸಿನಿಮಾದ ಬಗ್ಗೆ ಜಾಲತಾಣಗಳಲ್ಲಿ ಘೋಷಣೆ ಮಾಡಿದ್ದರು. ಸಿನಿಮಾದ ಬಿಡುಗಡೆ ದಿನಾಂಕ ಇನ್ನೂ ಪ್ರಕಟವಾಗಿಲ್ಲ.


















