ಬೆಂಗಳೂರು: ಬೆಂಗಳೂರಿನ ಪೇಯಿಂಗ್ ಗೆಸ್ಟ್ಗಳು ಮತ್ತು ಅಪಾರ್ಟ್ಮೆಂಟ್ ನಿವಾಸಿಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಶುಭ ಸುದ್ದಿ ನೀಡಿದೆ.
ಪಿಜಿಗಳು ಹಾಗೂ ಅಪಾರ್ಟ್ಮೆಂಟ್ಗಳಿಗೆ ಸರಬರಾಜು ಮಾಡುವ ನೀರಿನ ದರ ಲೆಕ್ಕಹಾಕುವ ವಿಧಾನದಲ್ಲಿ ತುಸು ಪರಿವರ್ತನೆ ಮಾಡಿದ್ದು, ಇದರಿಂದ ಪಿಜಿಗಳು ಹಾಗೂ ಅಪಾರ್ಟ್ಮೆಂಟ್ ಗಳಿಗೆ ನೀರಿನ ದರ ಕಡಿಮೆಯಾಗಿದೆ.
ಹೆಚ್ಚು ನೀರು ಬಳಸುವ ಅಪಾರ್ಟ್‌ಮೆಂಟ್ ಕಟ್ಟಡಗಳನ್ನು ಸ್ವಯಂಚಾಲಿತವಾಗಿ ಹೆಚ್ಚಿನ ಸ್ಲ್ಯಾಬ್‌ಗಳಿಗೆ ಸೇರಿಸಲಾಗುತ್ತಿತ್ತು. ಇದು ಬಿಲ್‌ಗಳ ಹೆಚ್ಚಳಕ್ಕೆ ಕಾರಣವಾಗಿತ್ತು. ಈ ವ್ಯವಸ್ಥೆ ಅನಿಯಂತ್ರಿತವಾಗಿದೆ. ನೀರನ್ನು ಹಂಚಿಕೊಳ್ಳುವ ಮನೆಗಳ ಸಂಖ್ಯೆಯನ್ನು ಪರಿಗಣಿಸುವಲ್ಲಿ ವಿಫಲವಾಗಿದೆ ಎಂದು ನಿವಾಸಿಗಳು ವಾದಿಸಿದ್ದಾರೆ.
ಇದಿಗ ದರ ಪರಿಷ್ಕರಣೆಯೊಂದಿಗೆ ಹೆಚ್ಚಿನ ಅಪಾರ್ಟ್‌ಮೆಂಟ್ ಗಳು ಕಡಿಮೆ ಬಿಲ್ ಪಡೆಯುವ ನಿರೀಕ್ಷೆಯಿದ್ದು, 200 ಕ್ಕಿಂತ ಕಡಿಮೆ ಮನೆಗಳನ್ನು ಹೊಂದಿರುವ ಸಣ್ಣ ಅಪಾರ್ಟ್‌ಮೆಂಟ್ ಗಳು ಹೊಸ ಸ್ಲ್ಯಾಬ್ ನಿಂದಾಗಿ ಹೆಚ್ಚಿನ ಶುಲ್ಕಗಳನ್ನು ಎದುರಿಸಬೇಕಾಗಬಹುದು ಪರಿಷ್ಕೃತ ದರದ ಅಡಿಯಲ್ಲಿ, ಅಪಾರ್ಟ್‌ಮೆಂಟ್ ನಲ್ಲಿರುವ ಪ್ರತಿ ಮನೆಗೆ ದಿನಕ್ಕೆ 200 ಲೀಟರ್‌ಗಳನ್ನು ನೀಡಲಾಗುವುದು.
ಪ್ರತಿ ಕಿಲೋಲೀಟರ್‌ಗೆ 32 ರೂ. ದರದಲ್ಲಿ ಶುಲ್ಕ ವಿಧಿಸಲಾಗುತ್ತದೆ. ಈ ಮಿತಿಯನ್ನು ದಾಟಿದ ಬಳಕೆಗೆ ಪ್ರತಿ ಕಿಲೋಲೀಟರ್‌ಗೆ 55 ರೂ. ಬಿಲ್ ಮಾಡಲಾಗುತ್ತದೆ. ಏಪ್ರಿಲ್ನಲ್ಲಿ ಮಾಡಿದ್ದ ನೀರಿನ ದರ ಪರಿಷ್ಕರಣೆಯ ಸಮಯದಲ್ಲಿ ಪಿಜಿ ವಸತಿ ಸೌಕರ್ಯಗಳ ಮೇಲೆ ವಿಧಿಸಲಾಗಿದ್ದ ದುಬಾರಿ ನೈರ್ಮಲ್ಯ ಶುಲ್ಕಗಳನ್ನು ಜಲಮಂಡಳಿ ಹಿಂತೆಗೆದುಕೊಂಡಿದೆ.
ನೈರ್ಮಲ್ಯ ಶುಲ್ಕ ವಿಧಿಸಿದ್ದರಿಂದ, ಹಿಂದಿನ ದರಗಳಿಗಿಂತ ಐದು ರಿಂದ ಏಳು ಪಟ್ಟು ಹಠಾತ್ ದರ ಹೆಚ್ಚಳವಾಗಿದೆ ಎಂದು ಮಾಲೀಕರು ದೂರಿದ್ದರು. ಮನವಿಗಳಿಗೆ ಸ್ಪಂದಿಸಿದ ಜಲಮಂಡಳಿ ಈಗ ನೈರ್ಮಲ್ಯ ಶುಲ್ಕವನ್ನು ಶೇ 50 ಕ್ಕಿಂತಲೂ ಹೆಚ್ಚು ಕಡಿತಗೊಳಿಸಿದ್ದು, ಏಪ್ರಿಲ್ ಪರಿಷ್ಕರಣೆಯ ನಂತರ 20 ಕ್ಕಿಂತ ಹೆಚ್ಚು ಕೊಠಡಿಗಳನ್ನು ಹೊಂದಿರುವ ಪಿಜಿಗಳಿಗೆ 7,500 ರೂ. ನೈರ್ಮಲ್ಯ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ ಈಗ 3,000 ರೂ. ಪಾವತಿಸಿದರೆ ಸಾಕಾಗಲಿದೆ ಎಂದು ತಿಳಿಸಿದೆ.