ಬೆಂಗಳೂರು: ಕೆಎಸ್ ಆರ್ ಟಿಸಿ ಟಿಕೆಟ್ ದರವನ್ನು ಶೇ. 15ರಷ್ಟು ಸರ್ಕಾರ ಹೆಚ್ಚಿಸಿದೆ. ಅಲ್ಲದೇ, ಅಗತ್ಯ ವಸ್ತುಗಳ ಬೆಲೆಗಳು ಕೂಡ ಏರಿಕೆ ಕಂಡಿವೆ. ಈ ಮಧ್ಯೆ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಈ ವರ್ಷ ಕುಡಿಯುವ ನೀರಿನ ದರ ಪರಿಷ್ಕರಣೆಯಾಗುವುದು ಕೂಡ ಬಹುತೇಕ ಖಚಿತ ಎನ್ನಲಾಗಿದೆ. ಈ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ಜನವರಿ ಅಂತ್ಯದೊಳಗೆ ನಗರದ ಎಲ್ಲ ಶಾಸಕರ ಸಭೆ ಕರೆದು ಚರ್ಚಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
10 ವರ್ಷಗಳಿಂದ ನೀರಿನ ದರ ಪರಿಷ್ಕರಣೆ ಆಗಿಲ್ಲ. ಪರಿಣಾಮ ನಗರದ ಸುಮಾರು ಒಂದೂವರೆ ಕೋಟಿ ಜನರಿಗೆ ನೀರು ಸರಬರಾಜು ಮಾಡುತ್ತಿರುವ ಬೆಂಗಳೂರು ಜಲಮಂಡಳಿಗೆ ಆದಾಯದ ಕೊರತೆ ಎದುರಾಗಿದೆ. ಸಂಗ್ರಹವಾಗುವ ಆದಾಯಕ್ಕಿಂತ ವೆಚ್ಚವೇ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದರ ಏರಿಕೆಯಾಗುವ ಸಾಧ್ಯತೆ ಇದೆ.
2014ರ ನವೆಂಬರ್-2024ರ ಮಾರ್ಚ್ ಮಧ್ಯೆ ವಿದ್ಯುತ್ ವೆಚ್ಚ ಶೇ.107.3ರಷ್ಟು ಹೆಚ್ಚಾಗಿದೆ. ಶೇ.122.5 ನಿರ್ವಹಣಾ ವೆಚ್ಚ ಮತ್ತು ಶೇ.61.3ರಷ್ಟು ವೇತನ ಮತ್ತು ಪಿಂಚಣಿ ವೆಚ್ಚ ಹೆಚ್ಚಳವಾಗಿದೆ. ಜಲಮಂಡಳಿಯ ಪ್ರತಿ ತಿಂಗಳ ವೆಚ್ಚ 170 ಕೋಟಿ ರೂ. ಆಗಿದ್ದರೆ, ಸಂಗ್ರಹಣೆ ಆಗುತ್ತಿರುವ ಪ್ರತಿ ತಿಂಗಳ ಆದಾಯ ಕೇವಲ 129 ಕೋಟಿ ರೂ.ಗಳಾಗಿದೆ. ಹೀಗಾಗಿ ನೀರಿನ ದರ ಹೆಚ್ಚಿಗೆ ಮಾಡುವುದು ಅನಿವಾರ್ಯ ಎನ್ನಲಾಗುತ್ತಿದೆ.