ಭೋಪಾಲ್ : ಚರಂಡಿ ನೀರು ಮಿಶ್ರಣಗೊಂಡಿದ್ದ ಕುಡಿಯುವ ನೀರನ್ನು ಸೇವಿಸಿ 7 ಜನರು ಸಾವನ್ನಪ್ಪಿರುವ ಘಟನೆ ಇಂದೋರ್‌ನ ಭಾಗೀರಥಪುರದಲ್ಲಿ ನಡೆದಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, 3 ಜನ ಸಾವನ್ನಪ್ಪಿರುವುದು ಮಾತ್ರ ದೃಢಪಟ್ಟಿದ್ದು, ಸ್ಥಳೀಯ ನಿವಾಸಿಗಳ 7 ಜನರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಸ್ಥಳೀಯ ಶಾಸಕ ಹಾಗೂ ಸಚಿವ ಕೈಲಾಶ್ ವಿಜಯವರ್ಗೀಯ, ಆಸ್ಪತ್ರೆಗಳಿಗೆ ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳಿಗೆ ಧೈರ್ಯ ಹೇಳಿ, ಉಚಿತ ಚಿಕಿತ್ಸೆಯ ಭರವಸೆ ನೀಡಿದ್ದಾರೆ. ಡಿಸೆಂಬರ್ 25ರಂದು ನಗರಪಾಲಿಕೆ ಸರಬರಾಜು ಮಾಡಿದ ನೀರು ದುರ್ವಾಸನೆ ಬೀರುತ್ತಿದೆ ಎಂದು ನಿವಾಸಿಗಳು ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದು, ನಗರದಲ್ಲಿನ ಕುಡಿಯುವ ನೀರಿನ ಸುರಕ್ಷತೆಯ ಕುರಿತು ಗಂಭೀರ ಚಿಂತನೆಗಳಿಗೆ ಕಾರಣವಾಗಿದೆ. ಮಧ್ಯ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಮಂಗಳವಾರ (ಡಿಸೆಂಬರ್ 30) ಸಂಜೆ ಕೆಲವು ಆಸ್ಪತ್ರೆಗಳಿಗೆ ಭೇಟಿ ನೀಡಿ, ಈ ದುರ್ಘಟನೆಗೆ ಇಂದೋರ್ ನಗರಪಾಲಿಕೆ ಆಯುಕ್ತರೇ ಹೊಣೆ ಎಂದು ಆರೋಪಿಸಿದ್ದಾರೆ ಮತ್ತು ಹೊಣೆಗಾರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದು ಮಹಾನಗರ ಪಾಲಿಕೆಯ ಸಂಪೂರ್ಣ ವೈಫಲ್ಯ. ಒಳಚರಂಡಿ ನೀರು ಕುಡಿಯುವ ನೀರಿನ ಪೈಪ್‌ಲೈನ್‌ಗೆ ಮಿಶ್ರಣವಾದರೆ ಜನರಿಗೆ ವಾಂತಿ-ಭೇದಿ, ಕಾಮಾಲೆ ಉಂಟಾಗಬಹುದು. ಆದರೆ ಸಾವಾಗುವುದಿಲ್ಲ. ಇಲ್ಲಿ ಯಾವುದೋ ವಿಷಕಾರಿ ಪದಾರ್ಥ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಸೇರಿರುವಂತೆ ಕಾಣುತ್ತಿದೆ. ಇದರ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು” ಎಂದು ಪಟ್ವಾರಿ ಆಗ್ರಹಿಸಿದ್ದಾರೆ. ಇನ್ನೂ ಘಟನೆಯ ಸಂಬಂಧ ಇಂದೋರ್ ಮಹಾನಗರ ಪಾಲಿಕೆ (IMC) ಹಾಗೂ ಮೇಯರ್ ಪುಷ್ಯಮಿತ್ರಾ ಭಾರ್ಗವ ಅವರ ವಿರುದ್ಧ ಇಂದೋರ್ ಜಿಲ್ಲಾ ಕಾಂಗ್ರೆಸ್ ಘಟಕವು ಎಫ್‌ಐಆರ್ ದಾಖಲಿಸುವ ಸಾಧ್ಯತೆ ಇದೆ.
ಇದನ್ನೂ ಓದಿ : ಶಿವಮೊಗ್ಗ | ಸಹದ್ಯೋಗಿ ಪೊಲೀಸ್ ಸಿಬ್ಬಂದಿಯಿಂದ ಕಿರುಕುಳ ; ಮಹಿಳೆ ಆತ್ಮಹತ್ಯೆ



















