ಬೆಂಗಳೂರು: ‘ವಿಷ್ಣು’ ಎಂಬ ಕಲಾಕೋಶ ಕನ್ನಡದಲ್ಲಿ ಹುಟ್ಟಬಾರದಿತ್ತು ಎನ್ನುವುದೇ ಸದ್ಯದ ಸಿಂಹಸೇನೆಯ ಮೌನ ಹೋರಾಟ..! ಇದ್ದಾಗಲೂ ಅದೇ ಷಡ್ಯಂತ್ರ, ಸತ್ತಗಲೂ ಕೈವಾಡಗಳ ಒಳನಗೆ. ಡಾ.ವಿಷ್ಣುವರ್ಧನ್ ಸಮಾಧಿ ನಾಶದ ನೋವು ತಾರಕಕ್ಕೆರಿದೆ. ಹೋದಮೇಲಾದರು ಅಭಿನವ ಭಾರ್ಗವನಿಗೆ ಸಿಕ್ಕಿದ್ದೇನು? ವ್ಯಾಪಾರದ ಕೆಂಡದೊಳಗೆ ಬಳಲಿ ಬೆಂದ ಅಭಿಮಾನ ಯಾರಿಗೂ ಕಾಣಿಸುತ್ತಿಲ್ವಾ?
ಸಿನಿಮಾ ರಾಜಕೀಯವನ್ನು ಯಾರಿಗೂ ಹೇಳದಂತೆ ಅನುಭವಿಸಿಯೇ ಮಾಯವಾಗಿಹೋದ ಡಾ.ವಿಷ್ಣುವರ್ಧನ್ ಎಲ್ಲಿಂದಲೋ ನಗುತ್ತಿದ್ದಾರಾ? ಗೊತ್ತಿಲ್ಲ. ನಕ್ಕು ಸುಮ್ಮನಾಗಿ ಅಭ್ಯಾಸವಿದ್ದ ಸಿಂಹನಿಗೆ ಈ ಸಮಾಧಿ ಧ್ವಂಸವೂ ಕಣ್ಣೀರು ಹಾಕಿಸಲಾಗದೆನೋ..! ಸ್ಯಾಂಡಲ್ ವುಡ್ ಇಂದು ವಿಷ್ಣು ನೆನಪಿನಲ್ಲಿ ಮತ್ತೆ ಒಂದಾಗಿದೆ. ಒಳಗಿನ ಕಿಚ್ಚು ಆಚೆ ಬರುವ ಸಮಯ ಬಂದಿದೆ. ಉಪೇಂದ್ರ, ಸುದೀಪ್, ಶ್ರೀಮುರಳಿ, ವಸಿಷ್ಠ ಸಿಂಹ ಸೇರಿದಂತೆ ಹಲವು ಸ್ಟಾರ್ ಗಳು ಅಭಿಮಾನದ ಬೆಂಕಿ ಉಗುಳಿವೆ. ‘ನಾನು ಯಜಮಾನನ ಅಭಿಮಾನಿಯಲ್ಲ, ಅವರ ಮನೆಯ ನಾಯಿ’ ಎಂಬ ನಿರ್ದೇಶಕ ರವಿ ಶ್ರೀವತ್ಸ ಅಸಹಾಯಕತೆಯ ಕಣ್ಣೀರು ನಾಟಕವಲ್ಲ. ಕರಾಳ ದಿನವೊಂದರ ಕಪ್ಪು ನೆನಪಿದು.
ಕನ್ನಡಿಗರ ಕಣ್ಮಣಿ ಕೋಟಿಗೊಬ್ಬನಿಗೆ ಮೂರಡಿ ಆರಡಿ ಜಾಗವಿಲ್ಲ ಎಂಬುದೇ ಒಂದು ದುರಂತ. 10 ಎಕರೆಯಲ್ಲಿ ತಲೆ ಎತ್ತಲಿರುವ ಮಾಲ್ ಯಾರ ಬುಡಕ್ಕೆ ಹೋಗುತ್ತಿದೆ ಎಂಬುದು ರಹಸ್ಯವಾಗಿ ಉಳಿದಿಲ್ಲ. ಅಭಿಮಾನಿಗಳು ವಿಷ್ಣು ಅಂತ್ಯಕ್ರಿಯೆ ನಡೆದ ಅಭಿಮಾನ ಸ್ಟುಡಿಯೋದಲ್ಲೇ ಸ್ಮಾರಕ ನಿರ್ಮಿಸಬೇಕು ಎಂದು ಹಿಡಿದ ಪಟ್ಟು ಈಗ ಶಾಶ್ವತವಾಗಿ ತಣ್ಣಗಾಗಿದೆ. ಕೋರ್ಟ್ ಆದೇಶದ ಮುಂದೆ ಅಭಿಮಾನಿಗಳ ಪ್ರತಿಭಟನೆ ನಡೆಯದು. ಹಿರಿಯನಟ ದಿವಂಗತ ಬಾಲಕೃಷ್ಣ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸತ್ಯಕ್ಕೆ ಹಿಡಿದ ಕೈಗನ್ನಡಿ.
ಕೋಟ್ಯಂತರ ಅಭಿಮಾನಿಗಳ ಕನಸು ಸದ್ಯಕ್ಕೆ ಒಂದೇ. ವಿಷ್ಣು ಸ್ಮಾರಕ ಮತ್ತೆ ಮರುಸ್ಥಾಪನೆಯಾಗಬೇಕು. ಇದು ಅಭಿಮಾನದ ಕ್ರಾಂತಿ ಖಂಡಿತ ಭಿಕ್ಷೆಯಲ್ಲ. ಬ್ಲೆಡ್ ನಿಂದ ವಿಷ್ಣು ಕೈ ಕೊಯ್ದ, ಕಟೌಟ್ ಗಳನ್ನ ಹರಿದುಹಾಕಿದ ಘಟನೆಗಳು ಮತ್ತೆ ಮತ್ತೆ ಕಾಡುತ್ತಲೇ ಇದೆ. ವಿಷ್ಣು ಕುಟುಂಬದ ನಿರ್ಧಾರದಂತೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣವಾಗಿದೆ. ಅಭಿಮಾನ್ ಸ್ಟುಡಿಯೋದ ಕೋರ್ಟ್ ತೀರ್ಪಿನಲ್ಲಿ ಫ್ಯಾನ್ಸ್ ಗೆ ಯಾವ ಪಾತ್ರವೂ ಇಲ್ಲ. ಇರುವುದು ರಾಶಿ ಗೊಂದಲಗಳ ಗೋಜಲು ನೋವಷ್ಟೇ..!