ಬೆಂಗಳೂರು : ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಕೂಡ ಶಾಕ್ ನೀಡಲು ಮುಂದಾಗಿದೆ.
ಹೀಗಾಗಿ ಜನ ಸಾಮಾನ್ಯರಿಗೆ ಮಾರ್ಚ್ ತಿಂಗಳಲ್ಲಿ ವಿದ್ಯುತ್ ದರ ಏರಿಕೆಯ ಶಾಕ್ ಎದುರಾಗುವ ಸಾಧ್ಯತೆ ಇದೆ. ಮುಂದಿನ ಮೂರು ವರ್ಷಗಳ ದರ ಏರಿಕೆಯನ್ನು ಒಮ್ಮೆಗೆ ನಿರ್ಧಾರ ಮಾಡಿ ಬಳಕೆದಾರರಿಗೆ ಶಾಕ್ ನೀಡಲು ಕೂಡ ನಿರ್ಧರಿಸಲಾಗಿದೆ ಎನ್ನಲಾಗಿದೆ. ಬೆಸ್ಕಾಂ ಸೇರಿ ವಿವಿಧ ಎಸ್ಕಾಂಗಳು ಈಗಾಗಲೇ ಕನಿಷ್ಠ 39 ಪೈಸೆಯಿಂದ ಹಿಡಿದು ಗರಿಷ್ಠ 1.32 ರೂ. ವರೆಗೆ ದರ ಹೆಚ್ಚಳ ಕೋರಿ ಕೆಇಆರ್‌ಸಿಗೆ ಪ್ರಸ್ತಾಪ ಸಲ್ಲಿಸಿವೆ. ಅದರಂತೆ ಕೆಇಆರ್‌ಸಿ ಏ.1 ರಿಂದ ಅನ್ವಯವಾಗುವಂತೆ ವಿದ್ಯುತ್ ದರ ಹೆಚ್ಚಳ ಮಾಡಿ ವಿದ್ಯುತ್ ಗ್ರಾಹಕರಿಗೆ ಶಾಕ್ ನೀಡಲಿದೆ.
ಎಸ್ಕಾಂಗಳು ಮುಂದಿನ ಮೂರು ವರ್ಷಗಳ ಅವಧಿಯ ವಿದ್ಯುತ್ ದರ ಹೆಚ್ಚಳವನ್ನು ಒಂದೇ ಬಾರಿಗೆ ಪ್ರಕಟಿಸುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಿದ್ದು, ಪ್ರತಿ ಯುನಿಟ್‌ಗೆ 37 ಪೈಸೆಯಿಂದ ಬರೋಬ್ಬರಿ 1.32 ರೂ. ವರೆಗೆ ಹೆಚ್ಚಳಕ್ಕೆ ಮನವಿ ಮಾಡಿವೆ.
ಬೆಸ್ಕಾಂ ಬೆಸ್ಕಾಂ ಮುಂದಿನ ಮೂರು ವರ್ಷಗಳ ಕಾಲ ಕ್ರಮವಾಗಿ ಪ್ರತಿ ಯುನಿಟ್‌ಗೆ 2025-26ನೇ ಸಾಲಿಗೆ 67 ಪೈಸೆ, 2026-27ಕ್ಕೆ 75 ಪೈಸೆ ಹಾಗೂ 2027-28ಕ್ಕೆ 91 ಪೈಸೆಯಂತೆ ದರ ಹೆಚ್ಚಳ ಮಾಡುವಂತೆ ಕೆಇಆರ್‌ಸಿಗೆ ಮನವಿ ಸಲ್ಲಿಸಿದೆ. ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮ (ಸೆಸ್ಕ್) 2025-26ಕ್ಕೆ 68 ಪೈಸೆ, 2026-27ಕ್ಕೆ 1.03 ರೂ., 2027-28ಕ್ಕೆ 1.23 ರೂ., ಮಂಗಳೂರಿನ ಮೆಸ್ಕಾಂ 2025-26ಕ್ಕೆ 70 ಪೈಸೆ, 2026-27ಕ್ಕೆ 0.37 ಪೈಸೆ, 2027-28ಕ್ಕೆ 0.54 ಪೈಸೆ, ಹುಬ್ಬಳ್ಳಿಯ ಹೆಸ್ಕಾಂ 2025-26ಕ್ಕೆ 0.69 ಪೈಸೆ, 2026-27ಕ್ಕೆ 1.18 ರು., 2027-28ಕ್ಕೆ 1.32 ರೂ. ಪ್ರತಿ ಯುನಿಟ್‌ಗೆ ಹೆಚ್ಚಳ ಮಾಡುವಂತೆ ಮನವಿ ಮಾಡಿವೆ ಎಂದು ತಿಳಿದು ಬಂದಿದೆ.
ವಿದ್ಯುತ್ ಉತ್ಪಾದನೆ, ಖರೀದಿ, ಪ್ರಸರಣ ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ ಅನಿವಾರ್ಯವಾಗಿ ದರ ಹೆಚ್ಚಳ ಮಾಡಬೇಕು ಎಂದು ಎಸ್ಕಾಂಗಳು ಮನವಿ ಮಾಡಿವೆ. ರಾಜ್ಯ ಸರ್ಕಾರ ‘ಗೃಹ ಜ್ಯೋತಿ’ಸಬ್ಸಿಡಿ ಹಣ ಮುಂಗಡವಾಗಿ ಪಾವತಿಸದಿದ್ದರೆ ಫಲಾನುಭವಿ ವಿದ್ಯುತ್ ಬಳಕೆದಾರರಿಂದಲೇ ಎಸ್ಕಾಂಗಳು ಹಣ ಸಂಗ್ರಹಿಸುವ ಕುರಿತು ಕೂಡ ಚರ್ಚೆ ನಡೆದಿದ್ದು, ಈ ಕುರಿತ ಆದೇಶ ಕೂಡ ಹೊರ ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
‘ರಾಜ್ಯ ಸರ್ಕಾರವು 200 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುವ ಗೃಹ ಬಳಕೆದಾರರಿಗೆ ಸಬ್ಸಿಡಿ ಯೋಜನೆ ಜಾರಿ ಮಾಡಿದೆ. ರಾಜ್ಯ ಸರ್ಕಾರ ಈ ಸಬ್ಸಿಡಿ ಹಣವನ್ನು ಮುಂಗಡವಾಗಿ ಎಸ್ಕಾಂಗಳಿಗೆ ಪಾವತಿಸಬೇಕು. ಇಲ್ಲದಿದ್ದರೆ ಕೆಇಆರ್‌ಸಿ (ಸಬ್ಸಿಡಿ ಪಾವತಿ) ನಿಯಮಗಳು-2008ರ ನಿಯಮ 6.1 ರ ಅಡಿ ಬಳಕೆ ಮಾಡಿರುವ ಗ್ರಾಹಕರಿಂದ ಒತ್ತಾಯದಿಂದ ಸಂಗ್ರಹಿಸಲು ಅವಕಾಶ ನೀಡಬೇಕು’ ಎಂದು ಎಸ್ಕಾಂಗಳು ಮನವಿ ಸಲ್ಲಿಸಿವೆ. ಹೀಗಾಗಿ ಗೃಹಜ್ಯೋತಿ ಯೋಜನೆಯ ಲಾಭ ಪಡೆಯುತ್ತಿರುವ 1.70 ಕೋಟಿ ಗ್ರಾಹಕರಿಗೆ ಈಗ ಹೊಸ ಶಾಕ್ ಎದುರಾಗಿದೆ.