ಬೆಂಗಳೂರು : ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ರಾಜಧಾನಿ ಬೆಂಗಳೂರಿನ ಹೋಟೆಲ್ ಉದ್ಯಮದ ಮೇಲೆ ಗಂಭೀರವಾಗಿ ಬೀರುತ್ತಿವೆ. ವಿಶೇಷವಾಗಿ ಕಮರ್ಷಿಯಲ್ LPG ಗ್ಯಾಸ್ ಸಿಲಿಂಡರ್‌ಗಳ ಕೊರತೆ ಮತ್ತು ಬೆಲೆ ಏರಿಕೆಯಿಂದ ಸಣ್ಣ ಹಾಗೂ ಮಧ್ಯಮ ಹೋಟೆಲ್ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ನಗರದಲ್ಲಿ ಸುಮಾರು 20 ರಿಂದ 25 ಹೋಟೆಲ್‌ಗಳು ಈಗಾಗಲೇ ಮಾರಾಟಕ್ಕೆ ಬಂದಿದ್ದು, ಇನ್ನೂ ಅನೇಕ ಹೋಟೆಲ್‌ಗಳು ಮಾರಾಟದ ಆಲೋಚನೆಯಲ್ಲಿ ಇರುವುದಾಗಿ ತಿಳಿದು ಬಂದಿದೆ. ಕಮರ್ಷಿಯಲ್ ಸಿಲಿಂಡರ್ ಸಿಗದ ಹಿನ್ನೆಲೆ ಹೋಟೆಲ್ ನಡೆಸುವುದು ಕಷ್ಟಕರವಾಗಿದ್ದು, ಇದರಿಂದ ಆರ್ಥಿಕ ನಷ್ಟ ಹೆಚ್ಚಾಗಿದೆ ಎಂದಿದ್ದಾರೆ.
ಹೋಟೆಲ್ ಮಾಲೀಕರು ಹೇಳುವಂತೆ, ಬಾಡಿಗೆ ದುಬಾರಿ ಆಗಿದ್ದು, ಆದಾಯ ಕಡಿಮೆಯಾಗಿರುವುದರಿಂದ ಬಾಡಿಗೆ ಕಟ್ಟುವುದೇ ಸವಾಲಾಗಿದೆ. ಇನ್ನೊಂದೆಡೆ, ಗ್ಯಾಸ್ ಕೊರತೆಯಿಂದ ಸಂಪೂರ್ಣ ಮೆನು ನೀಡಲು ಸಾಧ್ಯವಾಗದೆ, ಹಲವೆಡೆ ದೋಸೆ ಕೌಂಟರ್‌ಗಳನ್ನೇ ಬಂದ್ ಮಾಡಲಾಗಿದೆ. ಇದರ ಪರಿಣಾಮವಾಗಿ ಗ್ರಾಹಕರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದ್ದು, ವ್ಯಾಪಾರ ಡಲ್ ಆಗಿದೆ.
ವ್ಯಾಪಾರ ಕುಸಿತದಿಂದ ಹಲವಾರು ಹೋಟೆಲ್‌ಗಳಲ್ಲಿ ಕೆಲಸದ ಕೊರತೆ ಉಂಟಾಗಿ, ಸಿಬ್ಬಂದಿಗಳು ತಮ್ಮ ಊರುಗಳಿಗೆ ತೆರಳುತ್ತಿರುವ ದೃಶ್ಯವೂ ಕಾಣಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಹಲವಾರು ಹೋಟೆಲ್‌ಗಳು ಮುಚ್ಚುವ ಹಂತಕ್ಕೇ ಬಂದಿವೆ. ಈ ಕುರಿತು ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘದ ಗೌರವ ಅಧ್ಯಕ್ಷ ಪಿಸಿ ರಾವ್ ಪ್ರತಿಕ್ರಿಯಿಸಿ, “ಕಮರ್ಷಿಯಲ್ ಸಿಲಿಂಡರ್‌ಗಳ ಕೊರತೆ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಇನ್ನಷ್ಟು ಹೋಟೆಲ್‌ಗಳು ಮುಚ್ಚುವ ಸಾಧ್ಯತೆ ಇದೆ” ಎಂದು ತಿಳಿಸಿದ್ದಾರೆ.
ಒಟ್ಟಾರೆ, ರಾಜಧಾನಿಯಲ್ಲಿ ಹೋಟೆಲ್ ಉದ್ಯಮ ಗಂಭೀರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಪರಿಹರಿಸುವ ಅಗತ್ಯವಿದೆ.
ಇದನ್ನೂ ಓದಿ : 20 ಸಾವಿರ ರೂ.ಗಿಂತ ಹೆಚ್ಚಿನ ಹಣವನ್ನು ಕೈಸಾಲ ಪಡೆಯುತ್ತಿದ್ದೀರಾ? ಹಾಗಾದರೆ, ಈ ಸುದ್ದಿ ತಪ್ಪದೇ ಓದಿ

















