ಬೆಂಗಳೂರು : ಸಾವಿರಾರು ಕಿಲೋಮೀಟರ್ ದೂರದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ಬೆಂಗಳೂರು ಸೇರಿದಂತೆ ಕರ್ನಾಟಕದ ಮಾರುಕಟ್ಟೆಗಳಿಗೂ ತಟ್ಟಿದೆ. ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಉಂಟಾದ ಕೊರತೆಯಿಂದ ಹೋಟೆಲ್ ಉದ್ಯಮ ಸಂಕಷ್ಟಕ್ಕೆ ಸಿಲುಕಿದ್ದು, ಇದರ ಪರಿಣಾಮವಾಗಿ ತರಕಾರಿ ಮಾರುಕಟ್ಟೆಯ ಮೇಲೂ ಪರಿಣಾಮ ಕಂಡುಬಂದಿದೆ.
ಸಿಲಿಂಡರ್ ಕೊರತೆಯಿಂದ ಹಲವಾರು ಹೋಟೆಲ್‌ಗಳು ತಮ್ಮ ಮೆನುಗಳನ್ನು ಕಡಿತಗೊಳಿಸಿದ್ದು, ಕೆಲವೆಡೆ ಹೋಟೆಲ್‌ಗಳು ತಾತ್ಕಾಲಿಕವಾಗಿ ಬಂದ್ ಆಗಿವೆ. ಇದರಿಂದ ದಿನನಿತ್ಯ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿದ್ದ ತರಕಾರಿಗಳ ಬೇಡಿಕೆ ಏಕಾಏಕಿ ಕುಸಿದಿದೆ. ಪರಿಣಾಮವಾಗಿ ಮಾರುಕಟ್ಟೆಗಳಲ್ಲಿ ತರಕಾರಿ ಉಳಿದುಕೊಳ್ಳುತ್ತಿದ್ದು, ಬೆಲೆಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ವ್ಯಾಪಾರಿಗಳ ಪ್ರಕಾರ, ಕಳೆದ ಎರಡು ಮೂರು ತಿಂಗಳ ಹಿಂದೆ ಕೆಜಿಗೆ ಸುಮಾರು 800ರವರೆಗೆ ಏರಿಕೆಯಾಗಿದ್ದ ನುಗ್ಗೆಕಾಯಿ ದರ ಕಳೆದ ವಾರ 100ಕ್ಕೆ ಇಳಿಕೆಯಾಗಿತ್ತು. ಇದೀಗ ಮತ್ತಷ್ಟು ಕುಸಿದು ಕೆಜಿಗೆ ಸುಮಾರು 60ಕ್ಕೆ ಮಾರಾಟವಾಗುತ್ತಿದೆ. ಅದೇ ರೀತಿ ಬಟಾಣಿ ಕೆಜಿಗೆ ಸುಮಾರು ₹40ಕ್ಕೆ ಲಭ್ಯವಿದೆ. ಈರುಳ್ಳಿ ಮತ್ತು ಟಮೋಟೋಗಳ ಬೆಲೆ ಕೂಡ ಕೆಜಿಗೆ ಕೇವಲ 15ರಿಂದ 20ಕ್ಕೆ ಇಳಿದಿವೆ.
ಇದರ ಜೊತೆಗೆ ಬಹುತೇಕ ತರಕಾರಿಗಳು ಕೆಜಿಗೆ ಸುಮಾರು 30 ದರದಲ್ಲೇ ಮಾರಾಟವಾಗುತ್ತಿವೆ. ಕೊತ್ತಂಬರಿ ಹಾಗೂ ಪುದೀನಾ ಒಂದು ಕಟ್ಟಿಗೆ ₹5ರಿಂದ 10ಕ್ಕೆ ಸಿಗುತ್ತಿವೆ. ಹೋಟೆಲ್‌ಗಳು ಮತ್ತು ವಿವಿಧ ಕಾರ್ಯಕ್ರಮಗಳು ಸಿಲಿಂಡರ್ ಕೊರತೆಯಿಂದ ಬಂದ್ ಆಗಿರುವುದೇ ಈ ಪರಿಸ್ಥಿತಿಗೆ ಪ್ರಮುಖ ಕಾರಣ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ಸದ್ಯ ಇರುವ ತರಕಾರಿ ದರಗಳು ಹೀಗಿವೆ: ಈರುಳ್ಳಿ 20, ಟಮೋಟೋ 20, ಬೀನ್ಸ್ 40, ಕ್ಯಾರೆಟ್ 50, ನುಗ್ಗೆಕಾಯಿ 60, ಬೀಟ್ರೂಟ್ 30, ಗೆಡ್ಡೆಕೋಸು 20, ಎಲೆಕೋಸು 20, ಸೋರೆಕಾಯಿ 30 ಮತ್ತು ಹಿರೇಕಾಯಿ 30.
ಯುದ್ಧದ ಪರಿಣಾಮವಾಗಿ ಕಮರ್ಷಿಯಲ್ ಗ್ಯಾಸ್ ಪೂರೈಕೆಯಲ್ಲಿ ಉಂಟಾದ ವ್ಯತ್ಯಯವು ಹೋಟೆಲ್ ಉದ್ಯಮದಷ್ಟೇ ಅಲ್ಲ, ತರಕಾರಿ ವ್ಯಾಪಾರಿಗಳ ಮೇಲೂ ಹೊರೆ ತಂದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ತರಕಾರಿ ಬೆಲೆ ಇನ್ನಷ್ಟು ಇಳಿದು ರೈತರು ಮತ್ತು ವ್ಯಾಪಾರಿಗಳಿಗೆ ಹೆಚ್ಚಿನ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಗ್ಯಾಸ್ ಪ್ರಾಬ್ಲಂ : ಪಿಜಿಗಳ ಮುಂದೆಯೇ ಸೌದೆ ಒಲೆಗಳು.. ಬಿಸಿ ಬಿಸಿ ಅಡುಗೆ ರೆಡಿ


















