ಬೆಂಗಳೂರು: ರಾಜ್ಯಪಾಲರು ಹಾಗೂ ಸರ್ಕಾರದ ಮದ್ಯೆ ದೊಡ್ಡ ಸಂಘರ್ಷ ನಡೆಯುತ್ತಿದೆ. ಪ್ರತಿದಿನ ಪತ್ರ ಬರೆಯುವ ಮೂಲಕ ರಾಜ್ಯಪಾಲರು ಸರ್ಕಾರವನ್ನು ಕಾಡುತ್ತಿದ್ದಾರೆ. ಈಗಾಗಲೇ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸಿಎಂಗೆ ಮುಡಾ ವಿಚಾರದಲ್ಲಿ ಸಂಕಷ್ಟ ಶುರುವಾಗಿದೆ.
ಹೀಗಾಗಿ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಮುಗಿ ಬಿದ್ದಿದೆ. ಈ ಹಿನ್ನಲೆಯಲ್ಲಿ ರಾಜ್ಯಪಾಲರ ಪತ್ರ ಸಮರಕ್ಕೆ ಸಿದ್ದರಾಮಯ್ಯ ಸರ್ಕಾರ ಬಾಣ ಹೂಡಿದ್ದಾರೆ. ರಾಜ್ಯಪಾಲರ ಯಾವುದೇ ಪತ್ರಗಳಿಗೆ ಕಾರ್ಯದರ್ಶಿಗಳು ಉತ್ತರಿಸಿಂದತೆ ಸಂಪುಟ ಸಭೆಯಲ್ಲಿ ನಿರ್ಣಯ ಅಂಗೀಕಾರ ಮಾಡಲಾಗಿದೆ.
ಸೆ. 26ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ಯಾವುದೇ ಪತ್ರಗಳಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಉತ್ತರಿಸದಂತೆ ನಿರ್ಣಯ ಕೈಗೊಳ್ಳಲಾಗಿದೆ. ಯಾವುದೇ ಪತ್ರ ಬರೆದರೂ ಸಂಪುಟ ಗಮನಕ್ಕೆ ತರಲು ಸಿಎಸ್ಗೆ ಸೂಚನೆ ನೀಡಲಾಗಿದ್ದು, ನೇರವಾಗಿ ರಾಜ್ಯಪಾಲರಿಗೆ ಉತ್ತರಿಸದಂತೆ ನಿರ್ಣಯ ಮೂಲಕ ಮುಖ್ಯಕಾರ್ಯದರ್ಶಿಗೆ ತಿಳಿಸಲಾಗಿದೆ. ಈ ಮೂಲಕ ರಾಜ್ಯಪಾಲರ ಪತ್ರವನ್ನು ಸಚಿವ ಸಂಪುಟದ ಗಮನಕ್ಕೆ ತರಲು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ.
ನಿಯಮದಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಸಂಪುಟದ ಗಮನಕ್ಕೆ ತರಬೇಕೆಂದು ನಿರ್ಣಯ ಅಂಗೀಕರಿಸಲಾಗಿದೆ. ಕಾರ್ಯದರ್ಶಿ ಬದಲು ಸಂಪುಟ ಮೂಲಕ ರಾಜ್ಯಪಾಲರ ಪತ್ರಗಳಿಗೆ ಸರ್ಕಾರದ ಉತ್ತರ ನೀಡಲು ನಿರ್ಧರಿಸಲಾಗಿದೆ. ಅಲ್ಲದೇ ಅಗತ್ಯವಿದ್ದರಷ್ಟೇ ಉತ್ತರಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ವಿಷಯವಾಗಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, ರಾಜ್ಯಪಾಲರು ಅಸಹನೆಯ ವರ್ತನೆಯೊಳಗೆ ಪತ್ರ ಬರೆಯುತ್ತಿದ್ದಾರೆ. ತಕ್ಷಣ ಅಥವಾ ಇವತ್ತೇ ಮಾಹಿತಿ ಕಳುಹಿಸಿ ಎಂದು ಸೂಚಿಸುತ್ತಿದ್ದಾರೆ. ಎಲ್ಲ ನಿಯಮಾವಳಿ ಪರಿಶೀಲನೆ ಮಾಡಿ ಕ್ಯಾಬಿನೆಟ್ ನಿರ್ಣಯಿಸಿದೆ. ಕಾರ್ಯದರ್ಶಿಗಳು ಸಂಪುಟ ನಿರ್ಣಯದ ಮೇಲೆ ಮುಂದುವರಿಯಬೇಕು. ಮಾಹಿತಿಯನ್ನು ಕಳಿಸುವ ಮೊದಲು ಸಂಪುಟ ನಿರ್ಣಯ ಪಾಲಿಸಬೇಕು.
ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇವೆ. ರಾಜ್ಯಪಾಲರ ಯಾವುದೇ ಪತ್ರಕ್ಕೂ ಸಂಪುಟ ಮೂಲಕ ಉತ್ತರಿಸಬೇಕು ಎಂದು ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.