ನವದೆಹಲಿ: ಪಹಲ್ಗಾಮ್ ದಾಳಿ (Pahalgam Terrorist Attack)ಯ ನಂತರ ಭಾರತ ಯಾವಾಗ? ಯಾವ ರೀತಿ ಮುಗಿ ಬೀಳತ್ತೋ? ಎಂಬ ಆತಂಕದಲ್ಲೇ ಪಾಕ್ ದಿನ ಕಳೆಯುತ್ತಿದೆ. ಪಹಲ್ಗಾಮ್ ಘಟನೆಯ ಹಿಂದೆ ಪಾಕಿಗಳ ಕೈವಾಡವಿರುವುದು ಸಾಬೀತಾದರೂ ಪಾಕ್ ಮಾತ್ರ ಒಪ್ಪಿಕೊಳ್ಳುತ್ತಿಲ್ಲ.
ಪಹಲ್ಗಾಮ್ ದಾಳಿಗೂ ನಮಗೂ ಸಂಬಂಧವಿಲ್ಲ. ದಾಳಿಗೆ ಭಾರತ ಯಾವುದೇ ಆಧಾರ ನೀಡಿಲ್ಲ ಎಂದು ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಮತ್ತೆ ಉದ್ಧಟತನದ ಮಾತು ಹೇಳಿದ್ದಾರೆ. ಇನ್ನೊಂದೆಡೆ ರಷ್ಯಾದಲ್ಲಿನ ಪಾಕಿಸ್ತಾನದ ರಾಯಭಾರಿ ಮುಹಮ್ಮದ್ ಖಾಲಿದ್ ಜಮಾಲಿ, ಭಾರತ ದಾಳಿ ಮಾಡಿದರೆ, ಪರಮಾಣು ದಾಳಿ ಪ್ರಯೋಗ ಮಾಡಬೇಕಾಗುತ್ತೆ ಅಂತ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.
ದಿನದಿಂದ ದಿನಕ್ಕೆ ಭಾರತದ ಪ್ರತೀಕಾರದ ಕ್ರಮಗಳು ಹೆಚ್ಚಾಗುತ್ತಿವೆ. ಪಾಕ್ ವಿರುದ್ಧ ಭಾರತ ಡಿಜಿಟಲ್ ಸ್ಟ್ರೈಕ್ ಸಾರಿದೆ. ಭಾರತದ ಯುದ್ಧ ಭೀತಿ ಬಗ್ಗೆ ಪೋಸ್ಟ್ ಮಾಡಿದ್ದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಎಕ್ಸ್ ಖಾತೆಯನ್ನು ಭಾರತ ನಿರ್ಬಂಧಿಸಿದೆ. ಭಾರತದ ವಿರುದ್ಧ ರಕ್ತ ಕಾರಿದ್ದ ಪಾಕ್ ಮಾಜಿ ಸಚಿವ ಬಿಲಾವಲ್ ಭುಟ್ಟೋ ಎಕ್ಸ್ ಖಾತೆಯನ್ನೂ ಬ್ಲಾಕ್ ಮಾಡಲಾಗಿದೆ.
ಭಾರತದ ಬಂದರುಗಳು, ಹಡಗು ಸಾಗಣೆ, ಜಲಮಾರ್ಗಗಳ ಸಚಿವಾಲಯವು ಇಂದಿನಿಂದ ಪಾಕಿಸ್ತಾನ ಧ್ವಜ ಹೊಂದಿರುವ ಹಡಗುಗಳು ಭಾರತೀಯ ಬಂದರುಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಿದೆ. ಸದ್ಯದ ವಾತಾವರಣ ಗಮನಿಸಿದರೆ ಯುದ್ಧ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ.