ವಿಜಯಪುರ: ಜಿಲ್ಲೆಯಲ್ಲಿ 14,201 ಎಕರೆ ಜಮೀನು ವಕ್ಫ್ ಮಂಡಳಿಗೆ ಸಂಬಂಧಿಸಿದ್ದಾಗಿದ್ದು, ಈ ಪೈಕಿ ಶೇ. 70ರಷ್ಟು ಆಸ್ತಿ ಮುಸ್ಲಿಂರಿಗೆ ಸೇರಿದೆ. ಇನ್ನುಳಿದ ಶೇ. 30ರಷ್ಟು ಪ್ರಮಾಣದ ಆಸ್ತಿ ಹಿಂದೂಗಳಿಗೆ ಮಾರಾಟವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಆಸ್ತಿಗಳ ಬಗ್ಗೆ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಹೊನವಾಡ ಗ್ರಾಮದಲ್ಲಿ 1200 ಎಕರೆ ರೈತರ ಭೂಮಿ, ವಕ್ಫ್ ಗೆ ಸೇರಿದೆ ಎಂದು ಸುದ್ದಿ ಹಬ್ಬಿದೆ. ಆದರೆ, ಅದು ಸುಳ್ಳು. ಇಲ್ಲಿನ ರೈತರಿಗೆ ನೋಟಿಸ್ ನೀಡಿಲ್ಲ. ಹೊನವಾಡ ಗ್ರಾಮದ ಜಮೀನಿನಗಳು 1974ರಲ್ಲಿ ವಕ್ಫ್ ಗೆಜೆಟ್ ನಲ್ಲಿ ತಪ್ಪಾಗಿ ನಮೂದಿಸಲಾಗಿದೆ. 1977ರಲ್ಲಿ ಈ ತಪ್ಪನ್ನು ವಕ್ಫ್ ಮಂಡಳಿ ಸರಿಪಡಿಸಿದೆ. 10 ರಿಂದ 11 ಎಕರೆ ಮಾತ್ರ ವಕ್ಫ್ಗೆ ಸೇರಿದೆ. ಉಳಿದ ಜಮೀನು ಹೊನವಾಡ ಗ್ರಾಮದ ರೈತರಿಗೆ ಸೇರಿದೆ. ಗೆಜೆಟ್ ನೋಟಿಫಿಕೇಷನ್ ನಿಂದ ಈ ಗೊಂದಲ ಉಂಟಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಯಲ್ಲಿ 433 ರೈತರಿಗೆ ನೋಟಿಸ್ ನೀಡಲಾಗಿದೆ. ಇಂಡಿ ತಹಶಿಲ್ದಾರ್ ನೋಟಿಸ್ ನೀಡದೆ ಸರ್ವೆ ನಂಬರ್ನಲ್ಲಿ 41ರಲ್ಲಿ ಇಂದೀಕರಣ ಮಾಡಿದ್ದಾರೆ. 1977ರಲ್ಲಿ ವಕ್ಫ್ ಮಂಡಳಿಯವರು ಇದನ್ನು ಸರಿಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಅಧಿಕಾರಿಗಳ ಎಡವಟ್ಟಿನಿಂದ ಸಿಂದಗಿಯ ಗುರುಲಿಂಗ ವಿರಕ್ತಮಠಕ್ಕೆ ನೋಟಿಸ್ ನೀಡಲಾಗಿತ್ತು. ಈಗ ತಹಸೀಲ್ದಾರ್ ಈ ಸಮಸ್ಯೆ ಸರಿ ಮಾಡಿದ್ದಾರೆ. 1 ಎಕರೆ 36 ಗುಂಟೆ ಜಮೀನು ಮಠಕ್ಕೆ ಸೇರಿದೆ. ಈ ಗೊಂದಲ ಬಗೆಹರಿಸಲು ಟಾಸ್ಕ್ ಪೋರ್ಸ್ ಸಮಿತಿ ರಚಿಸಲಾಗಿದೆ ಎಂದಿದ್ದಾರೆ.