ನವದೆಹಲಿ: ತೀವ್ರ ಚರ್ಚೆಗೆ ಹಾಗೂ ವಿವಾದಕ್ಕೆ ಗ್ರಾಸವಾಗಿದ್ದ ವಕ್ಫ್ (ತಿದ್ದುಪಡಿ) ಮಸೂದೆ 2025ಕ್ಕೆ(Waqf Bill) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ. ಈ ಮೂಲಕ ಏಪ್ರಿಲ್ 5, 2025ರಂದು ವಿವಾದಿತ ವಿಧೇಯಕವು ಕಾನೂನಾಗಿ ಜಾರಿಗೆ ಬಂದಿದೆ. ಭಾರತದಲ್ಲಿ ವಕ್ಫ್ ಆಸ್ತಿಗಳ ಆಡಳಿತ ಮತ್ತು ನಿರ್ವಹಣೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎನ್ನಲಾದ ಈ ಮಸೂದೆಯು ಇತ್ತೀಚೆಗಷ್ಟೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸುದೀರ್ಘ ಮತ್ತು ತೀವ್ರ ಚರ್ಚೆಗಳ ನಂತರ ಅಂಗೀಕರಿಸಲ್ಪಟ್ಟಿತು.
ವಕ್ಫ್ (ತಿದ್ದುಪಡಿ) ಮಸೂದೆಗೆ ಏಪ್ರಿಲ್ 3, 2025 ರಂದು ಲೋಕಸಭೆಯಲ್ಲಿ ಅನುಮೋದನೆ ಪಡೆದಿತ್ತು. ಇದಕ್ಕೂ ಮೊದಲು ಸುಮಾರು 12 ಗಂಟೆಗಳ ಸುದೀರ್ಘ ಚರ್ಚೆ ನಡೆದಿದ್ದು, ವಿಧೇಯಕವನ್ನು ಮತಕ್ಕೆ ಹಾಕಿದಾಗ 288 ಸದಸ್ಯರು ಮಸೂದೆಗೆ ಬೆಂಬಲ ನೀಡಿದರೆ, 232 ಸದಸ್ಯರು ವಿರೋಧಿಸಿದ್ದರು. ನಂತರ ಏಪ್ರಿಲ್ 4ರಂದು ರಾಜ್ಯಸಭೆಯಲ್ಲಿ 13 ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆದು, ಮಧ್ಯರಾತ್ರಿಯ ನಂತರ ಮತದಾನ ನಡೆದಿತ್ತು. ಇಲ್ಲಿ 128 ಸದಸ್ಯರು ಮಸೂದೆ ಪರ ಮತ ಹಾಕಿದರೆ, 95 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದ್ದರು. ಈ ಎರಡೂ ಸದನಗಳಲ್ಲಿ ಮಸೂದೆ ಅಂಗೀಕಾರಗೊಂಡ ನಂತರ, ಅದನ್ನು ರಾಷ್ಟ್ರಪತಿಗಳ ಅಂಗೀಕಾರಕ್ಕಾಗಿ ಕಳುಹಿಸಲಾಗಿತ್ತು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಏಪ್ರಿಲ್ 5ರಂದು ವಿಧೇಯಕಕ್ಕೆ ಸಹಿಯನ್ನು ಹಾಕಿದ್ದು, ಈ ಮೂಲಕ ವಕ್ಫ್ (ತಿದ್ದುಪಡಿ) ಕಾಯಿದೆ 2025 ಎಂಬ ಹೊಸ ಕಾನೂನು ಜಾರಿಗೆ ಬಂದಿದೆ. ಈ ಕಾನೂನಿನ ಜೊತೆಗೆ, 1923 ರ ಮುಸಲ್ಮಾನ್ ವಕ್ಫ್ ಕಾಯಿದೆಯನ್ನು ರದ್ದುಗೊಳಿಸುವ ಮಸೂದೆಯೂ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟು, ಅದಕ್ಕೂ ರಾಷ್ಟ್ರಪತಿಗಳು ಸಹಿ ಹಾಕಿರುವ ಕಾರಣ, ಈ ಕಾಯ್ದೆ ರದ್ದಾಗಿದೆ.
ಮಸೂದೆಯ ಮುಖ್ಯ ಉದ್ದೇಶಗಳು
ವಕ್ಫ್ (ತಿದ್ದುಪಡಿ) ಕಾಯಿದೆ 2025 ರ ಪ್ರಕಾರ, 1995 ರ ವಕ್ಫ್ ಕಾಯಿದೆಯಲ್ಲಿ ತಿದ್ದುಪಡಿಗಳನ್ನು ತರಲಾಗಿದೆ. ಈ ಕಾನೂನು ವಕ್ಫ್ ಆಸ್ತಿಗಳ ದಾಖಲಾತಿ, ನಿರ್ವಹಣೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಸರ್ಕಾರದ ಪ್ರಕಾರ, ಈ ತಿದ್ದುಪಡಿಗಳು ಮುಸ್ಲಿಂ ಸಮುದಾಯದ ಮಹಿಳೆಯರು, ವಿಧವೆಯರು ಮತ್ತು ಬಡವರಿಗೆ ಪ್ರಯೋಜನವನ್ನು ಒದಗಿಸಲಿವೆ.
ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರ ಸೇರ್ಪಡೆ: ಕೇಂದ್ರ ವಕ್ಫ್ ಮಂಡಳಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಗರಿಷ್ಠ 4 ಮುಸ್ಲಿಮೇತರ ಸದಸ್ಯರು ಇರುವಂತೆ ತಿದ್ದುಪಡಿ ತರಲಾಗಿದೆ.
ತಂತ್ರಜ್ಞಾನದ ಬಳಕೆ: ವಕ್ಫ್ ಆಸ್ತಿಗಳ ದಾಖಲಾತಿ ಮತ್ತು ನಿರ್ವಹಣೆಯಲ್ಲಿ ತಂತ್ರಜ್ಞಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸುವ ಉದ್ದೇಶವಿದೆ.
ಪಾರದರ್ಶಕತೆ: ವಕ್ಫ್ ಮಂಡಳಿಗಳಲ್ಲಿ ಭ್ರಷ್ಟಾಚಾರ ಮತ್ತು ದುರ್ವಿನಿಯೋಗವನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ವಿರೋಧ ಮತ್ತು ಟೀಕೆಗಳು
ಈ ಮಸೂದೆಗೆ ವಿರೋಧ ಪಕ್ಷಗಳು ಮತ್ತು ಮುಸ್ಲಿಂ ಸಂಘಟನೆಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಆಪ್ ನಾಯಕ ಅಮಾನತುಲ್ಲಾ ಖಾನ್ ಹಾಗೂ ಸರ್ಕಾರೇತರ ಸಂಸ್ಥೆಯೊಂದು ಈ ತಿದ್ದುಪಡಿ ವಿಧೇಯಕವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕಾಯಿದೆ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಮತ್ತು ಮುಸ್ಲಿಂ ಸಮುದಾಯದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎನ್ನುವುದು ಇವರ ವಾದವಾಗಿದೆ.
ಇದೇ ವೇಳೆ, ದೇಶದ ವಿವಿಧ ಭಾಗಗಳಲ್ಲಿ, ವಿಶೇಷವಾಗಿ ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಈ ಕಾನೂನಿನ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಪ್ರತಿಭಟನಾಕಾರರು ಈ ಕಾಯಿದೆಯನ್ನು “ವಕ್ಫ್ ಆಸ್ತಿಗಳಿಗೆ ಒಡ್ಡುವ ಬೆದರಿಕೆ” ಎಂದು ಕರೆದಿದ್ದು, ಇದನ್ನು ತಕ್ಷಣವೇ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.