ನವದೆಹಲಿ: ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮಸೂದೆ ಮಂಡಿಸಿದೆ. ದೇಶದ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂಬುದಾಗಿ ಘೋಷಿಸಲು ಆಗದಿರುವುದು ಸೇರಿ ಹಲವು ನಿಯಮಗಳು ಜಾರಿಗೆ ಬರಲಿವೆ. ಇದರ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಪ್ರತಿಪಕ್ಷಗಳು ಟೀಕೆಗಳನ್ನು ವ್ಯಕ್ತಪಡಿಸುತ್ತಿವೆ. ಇದರ ಬೆನ್ನಲ್ಲೇ, “ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವುದರಿಂದ ಬಡ ಮುಸ್ಲಿಮರಿಗೆ ಅನುಕೂಲವಾಗಲಿದೆ” ಎಂದು ಆಲ್ ಇಂಡಿಯಾ ಸೂಫಿ ಸಜ್ಜಾದನಾಶಿನ್ ಕೌನ್ಸಿಲ್ ಚೇರ್ಮನ್ ಆಗಿರುವ ಸೈಯದ್ ನಾಸೀರುದ್ದೀನ್ ಚಿಷ್ಟಿ ಹೇಳಿದ್ದಾರೆ. ಇದರೊಂದಿಗೆ ವಕ್ಫ್ (Waqf Bill) ಮಸೂದೆಗೆ ಇಸ್ಲಾಂ ಧರ್ಮಗುರುವಿನಿಂದಲೂ ಬೆಂಬಲ ದೊರೆತಂತಾಗಿದೆ.
“ವಕ್ಫ್ ಮಸೂದೆಗೆ ತಿದ್ದುಪಡಿ ತರಬೇಕು ಎಂದು ಮುಸ್ಲಿಮರು ವರ್ಷಗಳಿಂದ ಕಾಯುತ್ತಿದ್ದರು. ಆದರೆ ಈಗ ಬಡ ಮುಸ್ಲಿಮರಿಗೂ ಅನುಕೂಲವಾಗುವ ಸಮಯ ಬಂದಿದೆ. ವಕ್ಫ್ ಮಂಡಳಿಗಳಅನುದಾನವು ಬಡವರಿಗೂ ಇನ್ನು ಲಭ್ಯವಾಗಲಿದೆ. ಇದು ಉತ್ತಮ ಮಸೂದೆಯಾಗಿದೆ” ಎಂದು ಹೇಳಿದ್ದಾರೆ.
ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಹಲವು ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮಸೂದೆಯು ಕಾಯ್ದೆಯಾಗಿ ಜಾರಿಯಾದರೆ ಮುಸ್ಲಿಮರು ಅಲ್ಲದವರು ವಕ್ಫ್ ಆಸ್ತಿ, ಧಾರ್ಮಿಕ ಸಂಸ್ಥೆಗಳನ್ನು ನಿರ್ವಹಣೆ ಮಾಡಲು ಆಗುವುದಿಲ್ಲ. ಹಾಗೆಯೇ, ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿಯೆಂದು ಘೋಷಣೆ ಮಾಡಲು ಆಗುವುದಿಲ್ಲ.
ವಕ್ಫ್ ಮಂಡಳಿಗೆ ಆಸ್ತಿ ದಾನ ಮಾಡುವವರಿಗೆ ಹೆಣ್ಣುಮಕ್ಕಳಿದ್ದರೆ, ಆಸ್ತಿಯಲ್ಲಿಅವರಿಗೂ ಪಾಲು ಸಿಗಲಿದೆ. ವಕ್ಫ್ ಆಸ್ತಿಯಲ್ಲಿ ಹೆಣ್ಣುಮಕ್ಕಳ ಸಹಭಾಗಿತ್ವ ಜಾಸ್ತಿಯಾಗಲಿದೆ. ಮಂಡಳಿಗಳಲ್ಲಿಪುರುಷರ ಜತೆಗೆ ಹೆಣ್ಣುಮಕ್ಕಳಿಗೂ ಸದಸ್ಯತ್ವ ದೊರೆಯುತ್ತದೆ. ಅಲ್ಲದೆ, ಆಸ್ತಿಯ ನಿರ್ವಹಣೆಯು ರಿಯಲ್ ಎಸ್ಟೇಟ್ ಉದ್ಯಮಿಗಳು, ಧರ್ಮಗುರುಗಳು ಸೇರಿ ಕೆಲವರ ಸ್ವತ್ತಾಗದೆ, ಪಾರದರ್ಶಕತೆ ಬರಲಿದೆ ಎಂದು ಸರ್ಕಾರ ತಿಳಿಸಿದೆ.