ವಕ್ಫ್ (ತಿದ್ದುಪಡಿ) ಮಸೂದೆ, 2024 ಬುಧವಾರ ಲೋಕಸಭೆಯಲ್ಲಿ ಮಂಡನೆಯಾಗಿದ್ದು, ಈ ವಿಧೇಯಕವು ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. 1995ರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶ ಹೊಂದಿರುವ ಈ ಮಸೂದೆಯನ್ನು ಲೋಕಸಭೆಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಮಂಡಿಸಿದ್ದು, ಈ ಕುರಿತ ಚರ್ಚೆಯು ಸತತ 8 ಗಂಟೆಗಳ ಅವಧಿಯನ್ನೂ ದಾಟುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಈ ತಿದ್ದುಪಡಿಗಳು ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಸುಧಾರಣೆ ತರುತ್ತವೆ ಎಂದು ಆಡಳಿತಾರೂಢ ಬಿಜೆಪಿ ವಾದಿಸಿದರೆ, ಪ್ರತಿಪಕ್ಷಗಳು ಈ ಮಸೂದೆ ಅಸಾವಿಧಾನಿಕ ಮತ್ತು ಮುಸ್ಲಿಮರ ವಿರುದ್ಧದ ತಾರತಮ್ಯ ಎಂದು ಬಣ್ಣಿಸಿವೆ. ಇಂಡಿಯಾ ಒಕ್ಕೂಟವು ಈ ವಿಧೇಯಕವನ್ನು ವಿರೋಧಿಸುವ ಶಪಥ ಮಾಡಿದ್ದು, ಭಾರೀ ರಾಜಕೀಯ ಯುದ್ಧಕ್ಕೆ ವೇದಿಕೆ ಕಲ್ಪಿಸಿದೆ.
ವಕ್ಫ್ ಮಸೂದೆ ಎಂದರೇನು?
ಮೂಲತಃ ವಸಾಹತುಶಾಹಿ ಯುಗದಲ್ಲಿ ಜಾರಿಗೆ ಬಂದ ಮುಸಲ್ಮಾನ್ ವಕ್ಫ್ ಕಾಯ್ದೆ, 1923, ನಂತರದಲ್ಲಿ ವಕ್ಫ್ ಕಾಯ್ದೆ, 1954 ಎಂದು ಬದಲಾಯಿತು. 1995ರಲ್ಲಿ ಇದಕ್ಕೆ ಕೆಲವು ತಿದ್ದುಪಡಿಗಳನ್ನು ಮಾಡಲಾಯಿತು. ಮುಸ್ಲಿಂ ಸಮುದಾಯಗಳ ಪರವಾಗಿ ಈ ತಿದ್ದುಪಡಿಗಳನ್ನು ಮಾಡಲಾಗಿದ್ದು, ವಕ್ಫ್ ಆಸ್ತಿ ನಿರ್ವಹಣೆಯಲ್ಲಿ ಕಾನೂನು ಸಂಕೀರ್ಣತೆಗಳನ್ನು ಸೃಷ್ಟಿಸಿತು ಎನ್ನುವುದು ಕೆಲವರ ವಾದವಾಗಿದೆ.
2024ರ ತಿದ್ದುಪಡಿ ಮಸೂದೆಯಲ್ಲೇನಿದೆ:
- ವಕ್ಫ್ ಕಾಯ್ದೆ ಹೆಸರನ್ನು ಹೊಸ ತಿದ್ದುಪಡಿಯಲ್ಲಿ ಬದಲಾಯಿಸಲಾಗಿದೆ
- ವಕ್ಫ್‌ನ ವ್ಯಾಖ್ಯಾನಗಳನ್ನು ನವೀಕರಿಸಲಾಗಿದೆ
- ವಕ್ಫ್ ಆಸ್ತಿಗಳ ನೋಂದಣಿ ಪ್ರಕ್ರಿಯೆಯನ್ನು ಸುಧಾರಿಸಲಾಗಿದೆ
- ದಾಖಲೆಗಳ ಸಮರ್ಪಕ ನಿರ್ವಹಣೆಗಾಗಿ ಹೊಸ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ
ಮುಸಲ್ಮಾನ್ ವಕ್ಫ್ ಕಾಯ್ದೆಯನ್ನು ರದ್ದುಗೊಳಿಸುವ ಶಾಸನದೊಂದಿಗೆ ಈ ಮಸೂದೆಯನ್ನು ಆಗಸ್ಟ್ 8, 2024ರಂದು ಸಂಸತ್ತಿನಲ್ಲಿ ಮಂಡಿಸಲಾಲಾಯಿತು.
ಕೇಂದ್ರ ಸರ್ಕಾರದ ನಿಲುವು ಏನು?
ಕಳೆದ ನವೆಂಬರ್‌ನಲ್ಲಿ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿನ ಭರ್ಜರಿ ಗೆಲುವಿನ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು,”ವಕ್ಫ್ ಕಾಂಗ್ರೆಸ್‌ನ ತುಷ್ಟೀಕರಣ ರಾಜಕೀಯದ ಕೂಸು. ಇದಕ್ಕೆ ಸಂವಿಧಾನದಲ್ಲಿ ಸ್ಥಾನವಿಲ್ಲ” ಎಂದು ಹೇಳಿದ್ದರು.
ಹಿಂದಿನ ಕಾಯ್ದೆಯಲ್ಲಿನ ನ್ಯೂನತೆಗಳನ್ನು ಪರಿಹರಿಸಲು ಮತ್ತು ವಕ್ಫ್ ಮಂಡಳಿಗಳ ದಕ್ಷತೆಯನ್ನು ಸುಧಾರಿಸಲು ಹೊಸ ಮಸೂದೆಯನ್ನು ರೂಪಿಸಲಾಗಿದೆ ಎನ್ನುವುದು ಸರ್ಕಾರದ ವಾದವಾಗಿದೆ. ಪ್ರಮುಖ ಬದಲಾವಣೆಗಳಲ್ಲಿ ಕಾಯ್ದೆಯ ಮರುನಾಮಕರಣ, ವಕ್ಫ್ ವ್ಯಾಖ್ಯಾನವನ್ನು ನವೀಕರಿಸುವುದು, ನೋಂದಣಿ ಪ್ರಕ್ರಿಯೆಯನ್ನು ಹೆಚ್ಚಿಸುವುದು ಮತ್ತು ದಾಖಲೆಗಳ ಸಮರ್ಪಕ ನಿರ್ವಹಣೆಗಾಗಿ ತಂತ್ರಜ್ಞಾನವನ್ನು ಸಂಯೋಜಿಸುವುದು ಸೇರಿವೆ. ಸರ್ಕಾರದ ಪ್ರಕಾರ, ವಕ್ಫ್ ಆಸ್ತಿಗಳ ಆಡಳಿತವನ್ನು ಸುಧಾರಿಸಲು, ದಕ್ಷತೆಯನ್ನು ಹೆಚ್ಚಿಸಲು ಮತ್ತು ರಾಜ್ಯ ವಕ್ಫ್ ಮಂಡಳಿಗಳು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಈ ತಿದ್ದುಪಡಿಗಳು ಅತ್ಯಗತ್ಯ ಎಂದೂ ಸರ್ಕಾರ ಹೇಳಿದೆ.

ಪ್ರತಿಪಕ್ಷಗಳ ವಾದವೇನು?
ಈ ಮಸೂದೆಯು ವಕ್ಫ್ ಆಸ್ತಿಗಳ ಮೇಲೆ ನಿಯಂತ್ರಣವನ್ನು ಕೇಂದ್ರೀಕರಿಸುತ್ತದೆ. ಈ ಆಸ್ತಿಗಳನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ. ಇದು ಅಲ್ಪಸಂಖ್ಯಾತರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎನ್ನುವುದು ವಿಪಕ್ಷಗಳ ಒಕ್ಕೂಟದ ಆರೋಪವಾಗಿದೆ. ಈ ವಿಧೇಯಕವು ಸ್ಥಳೀಯ ಆಡಳಿತ ಮತ್ತು ಧಾರ್ಮಿಕ ಸ್ವಾಯತ್ತತೆಗೆ ಬೆದರಿಕೆಯನ್ನುಂಟು ಮಾಡುತ್ತದೆ ಎಂದಿವೆ. ಅಲ್ಲದೇ ಮಸೂದೆ ಕುರಿತ ಚರ್ಚೆಗೆ ಸರ್ಕಾರ ನಿಗದಿಪಡಿಸಿದ ಸೀಮಿತ ಸಮಯದ ಬಗ್ಗೆಯೂ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಜಂಟಿ ಸಂಸದೀಯ ಸಮಿತಿಯಲ್ಲಿ (ಜೆಪಿಸಿ) ತಿಂಗಳುಗಳ ಕಾಲ ವಿಧೇಯಕದ ಕುರಿತು ಚರ್ಚೆ, ಸಮಾಲೋಚನೆ ನಡೆದಿದ್ದು, ನಮ್ಮ ನಿಲುವನ್ನು ಸ್ಪಷ್ಟಪಡಿಸಲು ಅವಕಾಶವನ್ನು ನೀಡಿಲ್ಲ ಎಂದೂ ವಿಪಕ್ಷಗಳು ಆರೋಪಿಸಿವೆ.
ವಕ್ಫ್ ಮಸೂದೆಯನ್ನು ಬೆಂಬಲಿಸುತ್ತಿರುವವರು ಯಾರು?
- ಭಾರತೀಯ ಜನತಾ ಪಕ್ಷ (ಬಿಜೆಪಿ)
- ಜೆಡಿಯು
- ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್)
- ತೆಲುಗು ದೇಶಂ ಪಕ್ಷ (ಟಿಡಿಪಿ)
- ಶಿವಸೇನೆ
……………….
ವಕ್ಫ್ ವಿಧೇಯಕ ವಿರೋಧಿಸುತ್ತಿರುವವರು ಯಾರು? - ಕಾಂಗ್ರೆಸ್
- ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ)
- ಸಮಾಜವಾದಿ ಪಕ್ಷ (ಎಸ್ಪಿ)
- ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)
- ತೃಣಮೂಲ ಕಾಂಗ್ರೆಸ್ (ಟಿಎಂಸಿ)
- ಆಮ್ ಆದ್ಮಿ ಪಕ್ಷ (ಎಎಪಿ)
- ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)
- ಸಿಪಿಎಂ
- ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)
ಮಸೂದೆ ಅಂಗೀಕಾರ ಆಗುತ್ತಾ?
ಲೋಕಸಭೆ: ಮಸೂದೆಯನ್ನು ಅಂಗೀಕರಿಸಲು, ಬಿಜೆಪಿಗೆ ಲೋಕಸಭೆಯಲ್ಲಿ 272 ಮತಗಳು ಬೇಕಾಗುತ್ತವೆ ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ 542. ಎನ್‌ಡಿಎ ಸದಸ್ಯಬಲ ಇಂತಿದೆ:
ಬಿಜೆಪಿ: 240 ಸಂಸದರು
ಜೆಡಿಯು: 12 ಸಂಸದರು
ಟಿಡಿಪಿ: 16 ಸಂಸದರು
ಎಲ್‌ಜೆಪಿ(ರಾಮ್ ವಿಲಾಸ್): 5 ಸಂಸದರು
ಆರ್‌ಎಲ್‌ಡಿ: 2 ಸಂಸದರು
ಶಿವಸೇನೆ: 7 ಸಂಸದರು
ಎನ್‌ಡಿಎ ಒಗ್ಗಟ್ಟಾಗಿ ನಿಂತರೆ, ಮಸೂದೆ ಅಂಗೀಕಾರವಾಗಲಿದೆ.
…
ರಾಜ್ಯಸಭೆ: ಮಸೂದೆ ಅಂಗೀಕಾರಗೊಳ್ಳಲು ರಾಜ್ಯಸಭೆಯಲ್ಲಿ 119 ಮತಗಳು ಬೇಕು. (ರಾಜ್ಯಸಭೆಯ ಒಟ್ಟು ಸದಸ್ಯರ ಸಂಖ್ಯೆ 245). ಎನ್‌ಡಿಎ ಸದಸ್ಯಬಲ ಇಂತಿದೆ:
ಬಿಜೆಪಿ: 98 ಸಂಸದರು
ಜೆಡಿಯು: 4 ಸಂಸದರು
ಟಿಡಿಪಿ: 2 ಸಂಸದರು
ಎನ್‌ಸಿಪಿ (ಅಜಿತ್ ಪವಾರ್ ಬಣ): 3 ಸಂಸದರು
ಶಿವಸೇನೆ: 1 ಸಂಸದ
ಆರ್‌ಎಲ್‌ಡಿ: 1 ಸಂಸದ
125 ಸಂಸದರನ್ನು ಹೊಂದಿರುವ ಎನ್‌ಡಿಎ, ಹೆಚ್ಚುವರಿಯಾಗಿ ಇತರೆ ಸಣ್ಣ ಪಕ್ಷಗಳು ಮತ್ತು ನಾಮನಿರ್ದೇಶಿತ ಸದಸ್ಯರಿಂದ ಮತಗಳನ್ನು ಪಡೆಯುವ ವಿಶ್ವಾಸದಲ್ಲಿದೆ.