ವಾಷಿಂಗ್ಟನ್: ಮೆಕ್ಸಿಕೋ ಮತ್ತು ಕೆನಡಾದ ಸರಕುಗಳ ಮೇಲೆ ಶೇಕಡಾ 25ರಷ್ಟು ಸುಂಕ ವಿಧಿಸುವ ನಿರ್ಧಾರವು ಮಂಗಳವಾರದಿಂದಲೇ ಜಾರಿಗೆ ಬರಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದಾರೆ. ಈ ಘೋಷಣೆಯು ಉತ್ತರ ಅಮೆರಿಕದಲ್ಲಿ ವ್ಯಾಪಾರ ಯುದ್ಧದ ಭೀತಿಯನ್ನು ಹುಟ್ಟುಹಾಕಿರುವುದು ಮಾತ್ರವಲ್ಲದೇ, ಜಗತ್ತಿನಾದ್ಯಂತ ಷೇರು ಮಾರುಕಟ್ಟೆಗಳನ್ನು ತಲ್ಲಣಗೊಳಿಸಿದೆ.
ಟ್ರಂಪ್ ಹೇಳಿಕೆ ಹೊರಬೀಳುತ್ತಿದ್ದಂತೆಯೇ ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿದೆ. ಯುಎಸ್ ಷೇರುಗಳು ತೀವ್ರ ಕುಸಿತ ಕಂಡಿದೆ. ಮೆಕ್ಸಿಕನ್ ಪೆಸೊ ಮತ್ತು ಕೆನಡಿಯನ್ ಡಾಲರ್‌ಗಳೂ ಕುಸಿತ ಎದುರಿಸಿವೆ.
ಶ್ವೇತಭವನದಲ್ಲಿ ಮಂಗಳವಾರ ಮಾತನಾಡಿದ ಟ್ರಂಪ್, “ಮೆಕ್ಸಿಕೋ ಮತ್ತು ಕೆನಡಾ ಮೇಲೆ ಸುಂಕ ಹೇರುವ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ಅವರು ಸುಂಕ ಪಾವತಿಸಲೇಬೇಕು. ಇಂದಿನಿಂದಲೇ ಅದು ಜಾರಿಗೆ ಬರಲಿದೆ. ಅವರು ಅಮೆರಿಕದಲ್ಲೇ ತಮ್ಮ ಕಾರು ತಯಾರಿಕಾ ಘಟಕಗಳನ್ನು ಸ್ಥಾಪಿಸಲಿ ಹಾಗೂ ಇತರೆ ಸರಕುಗಳನ್ನು ಇಲ್ಲೇ ತಯಾರಿಸಲಿ, ಆಗ ಅವರಿಗೆ ಸುಂಕ ಹೇರುವುದಿಲ್ಲ” ಎಂದು ಹೇಳಿದ್ದಾರೆ. ಜೊತೆಗೆ, ಸುಂಕವನ್ನು ತಪ್ಪಿಸುವ ಯಾವುದೇ ಅವಕಾಶವನ್ನೂ ಅವರಿಗೆ ನೀಡಲಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಅಮೆರಿಕದ ಸರಕುಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಎಲ್ಲ ದೇಶಗಳಿಗೂ ಪ್ರತಿ ತೆರಿಗೆ ವಿಧಿಸುವ ನಿರ್ಧಾರವು ಏಪ್ರಿಲ್ 2ರಿಂದಲೇ ಜಾರಿಗೆ ಬರಲಿವೆ ಎಂದೂ ಟ್ರಂಪ್ ಘೋಷಿಸಿದ್ದಾರೆ. ಇದು ಜಾರಿಯಾದರೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಇದರ ಬಿಸಿ ತಟ್ಟಲಿದೆ.
ಅಮೆರಿಕಕ್ಕೆ ಫೆಂಟಾನಿಲ್ ಸಾಗಣೆಯನ್ನು ಮುಂದುವರಿಸಿರುವ ಚೀನಾ ವಿರುದ್ಧವೂ ಕೆಂಡಕಾರಿರುವ ಟ್ರಂಪ್, ಬೀಜಿಂಗ್‌ನ ಈ ನಡೆಗೆ ತಕ್ಕ ಶಿಕ್ಷೆ ನೀಡುತ್ತೇವೆ. ಚೀನಾದ ಆಮದಿನ ಮೇಲಿನ ಸುಂಕವನ್ನು ಹಿಂದಿನ ಶೇಕಡಾ 10ರಿಂದ 20ಕ್ಕೆ ಹೆಚ್ಚಿಸುತ್ತೇನೆ ಎಂದೂ ಘೋಷಿಸಿದ್ದಾರೆ. ಅಕ್ರಮ ಮಾದಕವಸ್ತು ಬಿಕ್ಕಟ್ಟನ್ನು ನಿವಾರಿಸಲು ಚೀನಾ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದೂ ದೂಷಿಸಿದ್ದಾರೆ.
ಅಮೆರಿಕಕ್ಕೆ ವರ್ಷಕ್ಕೆ 900 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಕೆನಡಾ ಮತ್ತು ಮೆಕ್ಸಿಕೋ ರಫ್ತು ಮಾಡುತ್ತವೆ. ಈಗ ಟ್ರಂಪ್ ಸುಂಕದ ನಿರ್ಧಾರವು ಉತ್ತರ ಅಮೆರಿಕದ ಆರ್ಥಿಕತೆಗೆ ಗಂಭೀರ ಹಿನ್ನಡೆಯನ್ನುಂಟು ಮಾಡಲಿದೆ ಎಂದು ಅರ್ಥಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಸುಂಕಗಳು ಮಂಗಳವಾರ ಮಧ್ಯರಾತ್ರಿ 12.01 ಕ್ಕೆ (ಭಾರತೀಯ ಕಾಲಮಾನ ರಾತ್ರಿ 10.30) ಜಾರಿಗೆ ಬರಲಿವೆ ಎಂದು ಟ್ರಂಪ್ ಆಡಳಿತ ದೃಢಪಡಿಸಿದೆ.
ಷೇರು ಮಾರುಕಟ್ಟೆ ಪತನ
ಟ್ರಂಪ್ ಘೋಷಣೆಯಿಂದಾಗಿ ಜಗತ್ತಿನಾದ್ಯಂತ ಷೇರು ಮಾರುಕಟ್ಟೆಗಳು ಪತನಗೊಂಡಿವೆ. ಡೋವ್ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿ 649.67 ಪಾಯಿಂಟ್ ಅಥವಾ ಶೇಕಡಾ 1.48ರಷ್ಟು ಕುಸಿತ ಕಂಡರೆ, ಎಸ್ & ಪಿ 500 104.78 ಪಾಯಿಂಟ್ ಅಥವಾ ಶೇಕಡಾ 1.76 ರಷ್ಟು ಕುಸಿದಿದೆ ಮತ್ತು ನಾಸ್ಡಾಕ್ ಕಾಂಪೊಸಿಟ್ 497.09 ಪಾಯಿಂಟ್ ಅಥವಾ ಶೇಕಡಾ 2.64 ರಷ್ಟು ಕುಸಿದಿದೆ.
ಮೆಕ್ಸಿಕೋದಲ್ಲಿ ಟ್ರಕ್ ಉತ್ಪಾದನೆಯಲ್ಲಿ ಖ್ಯಾತಿ ಗಳಿಸಿರುವ ಜನರಲ್ ಮೋಟಾರ್ಸ್ ಷೇರುಗಳು ಶೇಕಡಾ 4 ರಷ್ಟು ಮತ್ತು ಫೋರ್ಡ್ ಶೇಕಡಾ 1.7 ರಷ್ಟು ಕುಸಿದಿದೆ. ಒಟ್ಟಿನಲ್ಲಿ ಆಟೋಮೊಬೈಲ್ ಕ್ಷೇತ್ರದ ಮೇಲೆ ಸುಂಕವು ದೊಡ್ಡ ಮಟ್ಟಿಗೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ನಿಚ್ಚಳವಾಗಿದೆ.
ಇದನ್ನೂ ಓದಿ: Donald Trump : ಡೊನಾಲ್ಡ್ ಟ್ರಂಪ್ ಪದಗ್ರಹಣದಲ್ಲಿ ಮುಖೇಶ್ ಅಂಬಾನಿ ದಂಪತಿ ಭಾಗಿ
ಇನ್ನು ಕೆಲವೇ ದಿನಗಳಲ್ಲಿ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿಯೂ ತಟ್ಟುವ ಸಾಧ್ಯತೆಯಿದೆ ಎಂದು ಕಾರ್ನೆಲ್ ವಿಶ್ವವಿದ್ಯಾಲಯದ ಸಾರ್ವಜನಿಕ ನೀತಿ ಪ್ರಾಧ್ಯಾಪಕರಾದ ಗುಸ್ಟಾವೊ ಫ್ಲೋರೆಸ್-ಮ್ಯಾಸಿಯಾಸ್ ಅಂದಾಜಿಸಿದ್ದಾರೆ.
ಮೆಕ್ಸಿಕೋ ಪ್ರತಿಕ್ರಿಯೆ ಹೇಗಿತ್ತು?
ಮೆಕ್ಸಿಕೋ ಈ ಮೊದಲು ತನ್ನ ಉತ್ತರ ಗಡಿಗೆ ಸಾವಿರಾರು ಸೈನಿಕರನ್ನು ಕಳುಹಿಸಲು ಕೊನೆಯ ಕ್ಷಣದಲ್ಲಿ ಟ್ರಂಪ್ ಜೊತೆಗೆ ಒಪ್ಪಂದವನ್ನು ಮಾಡಿಕೊಳ್ಳುವ ಮೂಲಕ ಟ್ರಂಪ್ ಅವರ ಮೊದಲ ಸುತ್ತಿನ ಸುಂಕದಿಂದ ತಪ್ಪಿಸಿಕೊಂಡಿತ್ತು. ಅಲ್ಲದೇ, ಮಾದಕವಸ್ತು ನಿಗ್ರಹ ಕ್ರಮಗಳನ್ನೂ ಹೆಚ್ಚಿಸಿ ಟ್ರಂಪ್‌ರನ್ನು ಸಮಾಧಾನಪಡಿಸಲು ಪ್ರಯತ್ನಿಸಿತ್ತು. ಆದರೆ, ಈಗ ಟ್ರಂಪ್ ಸುಂಕದ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೆನ್ಬಾಮ್, “ನಾವು ಟ್ರಂಪ್ ಘೋಷಣೆಯನ್ನು ನಿರೀಕ್ಷಿಸಿದ್ದೆವು. ಹೀಗಾಗಿ ಶಾಂತವಾಗಿದ್ದೇವೆ. ಅವರು ಸುಂಕ ಹೇರಿದ್ದೇ ಆದಲ್ಲಿ ಅದಕ್ಕೆ ಪ್ರತಿಕ್ರಿಯಿಸಲೂ ನಾವು ಸಿದ್ಧರಾಗಿದ್ದೇವೆ” ಎಂದಿದ್ದಾರೆ. ಜೊತೆಗೆ “ನಮ್ಮ ಬಳಿ ಪ್ಲಾನ್ ಬಿ, ಸಿ, ಡಿ ಎಲ್ಲವೂ ಇದೆ” ಎಂದಿದ್ದಾರೆ.
ಕೆನಡಾ ಮತ್ತು ಮೆಕ್ಸಿಕೋದ ಮೇಲೆ ಸುಂಕವನ್ನು ಮುಂದುವರಿಸುವ ನಿರ್ಧಾರವು ಅಮೆರಿಕದ ಕುಟುಂಬಗಳಿಗೆ ದುಬಾರಿಯಾಗಿ ಪರಿಣಮಿಸಲಿದೆ. ಕಿರಾಣಿ ಅಂಗಡಿ, ಗ್ಯಾಸ್ ಸ್ಟೇಷನ್ ಮತ್ತು ಫಾರ್ಮಸಿಗೆ ಅಮೆರಿಕದ ಜನರು ಸಾವಿರಾರು ಡಾಲರ್ ಗಳನ್ನು ವೆಚ್ಚ ಮಾಡಬೇಕಾಗಿ ಬರಲಿದೆ ಎಂದು ವಾಷಿಂಗ್ಟನ್‌ನ ಡೆಮಾಕ್ರಟಿಕ್ ಪ್ರತಿನಿಧಿ ಸುಜಾನ್ ಡೆಲ್ಬೆನ್ ಹೇಳಿದ್ದಾರೆ. ಅಲ್ಲದೇ, ಯಾವುದೇ ಅಧ್ಯಕ್ಷಕು ಕಾಂಗ್ರೆಸ್‌ನಲ್ಲಿ ಮತಕ್ಕೆ ಹಾಕದೇ ಯಾವುದೇ ದೇಶದ ಮೇಲಿನ ತೆರಿಗೆಯನ್ನು ಹೆಚ್ಚಿಸುವಂತಿಲ್ಲ ಎಂದೂ ಅವರು ಹೇಳಿದ್ದಾರೆ.