ಬೆಂಗಳೂರು: ಚಂದನವನದಲ್ಲಿ ಜಸ್ಟ್ ಮ್ಯಾರೀಡ್ ಚಿತ್ರದ ಪ್ರೇಮಗೀತೆಯೊಂದು ಪ್ರೇಮಿಗಳ ದಿನದಂದೇ ಬಿಡುಗಡೆಯಾಗಿದೆ. ಹಾಡಿನ ಬಗ್ಗೆ ಅಶ್ವಿನಿ ಪುನೀತ್ ರಾಜಕುಮಾರ್ ಮಾತನಾಡಿದ್ದಾರೆ.
“ಕಾಂತಾರ” ಚಿತ್ರ ಸೇರಿದಂತೆ ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿರುವ ಅಜನೀಶ್ ಲೋಕನಾಥ್ abbs studios ಲಾಂಛನದಲ್ಲಿ ಸಿ.ಆರ್ ಬಾಬಿ ಅವರ ಜೊತೆಗೂಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರವನ್ನು ಸಿ.ಆರ್.ಬಾಬಿ ನಿರ್ದೇಶಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ಜೋಡಿಯ “ಜಸ್ಟ್ ಮ್ಯಾರೀಡ್” ಚಿತ್ರಕ್ಕಾಗಿ ಪ್ರೇಮಕವಿ ಕೆ.ಕಲ್ಯಾಣ್ ಸಂಗೀತ ಬರೆದಿದ್ದಾರೆ. ಅವರು ಸಂಗೀತ ಬರೆದಿರುವ “ಇದು ಮೊದಲನೇ ಸ್ವಾಗತಾನಾ” ಎಂಬ ಹಾಡು ಪ್ರೇಮಿಗಳ ದಿನದಂದೇ ಬಿಡುಗಡೆಯಾಗಿದೆ.
ಈ ಗೀತೆಯನ್ನು ಬಿಡುಗಡೆ ಮಾಡಿರುವ ಅಶ್ವಿನಿ ಪುನೀತ್ ರಾಜಕುಮಾರ್, “ಇದು ಮೊದಲನೇ ಸ್ವಾಗತನಾ” ಹಾಡು ತುಂಬಾ ಚೆನ್ನಾಗಿದೆ. ಬಾಬಿ ಅವರ ನಿರ್ದೇಶನದಲ್ಲಿ ಹಾಗೂ ಅಜನೀಶ್ ಲೋಕನಾಥ್ ಅವರ ನಿರ್ಮಾಣದಲ್ಲಿ ಮೂಡಿ ಬಂದಿರುವ “ಜಸ್ಟ್ ಮ್ಯಾರೀಡ್” ಚಿತ್ರದ ಬಿಡುಗಡೆಗೆ ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ.
ನಿರ್ದೇಶಕಿ ಬಾಬಿ ಅವರೇ ಕಥೆ ಬರೆದಿದ್ದಾರೆ. ಚಿತ್ರಕಥೆ ಸಿ.ಆರ್ ಬಾಬಿ ಹಾಗೂ ಧನಂಜಯ್ ರಂಜನ್ ಅವರದು. ರಘು ನಿಡುವಳ್ಳಿ ಈ ಚಿತ್ರದ ಸಂಭಾಷಣೆ ಬರೆದಿದ್ದಾರೆ. ಶೈನ್ ಶೆಟ್ಟಿ, ಅಂಕಿತ ಅಮರ್, ದೇವರಾಜ್, ಅಚ್ಯುತಕುಮಾರ್, ಮಾಳವಿಕ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಸಾಕ್ಷಿ ಅಗರವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ವಾಣಿ ಹರಿಕೃಷ್ಣ, ಸಂಗೀತ ಅನಿಲ್, ಕುಮುದಾ, ಜಯರಾಮ್, ವೇದಿಕಾ ಕಾರ್ಕಳ್ ಸೇರಿದಂತೆ ಹಲವರು ಈ ಚಿತ್ರದಲ್ಲಿದ್ದಾರೆ.