ಕಲ್ಪವಾಸ್ ವ್ರತ ಕೈಗೊಳ್ಳಲಿರುವ ಲಾರೀನ್ ಪೋವೆಲ್ ಜಾಬ್ಸ್
ಆತ್ಮಶುದ್ಧಿಗಾಗಿ ಭಾರತಕ್ಕೆ ಬಂದ ವಿಶ್ವದ ಶ್ರೀಮಂತ ಮಹಿಳೆ
ಪ್ರಯಾಗ್‌ರಾಜ್: ಇದೇ 13ರಿಂದ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ (kumba mela) ಆರಂಭವಾಗಲಿದ್ದು, ವಿಶ್ವದ ಮೂಲೆ ಮೂಲೆಗಳಿಂದಲೂ ಲಕ್ಷಾಂತರ ಯಾತ್ರಾರ್ಥಿಗಳು ಈ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಳ್ಳುವವರಿದ್ದಾರೆ. ವಿಶೇಷವೆಂದರೆ ಈ ಬಾರಿಯ ಮಹಾಕುಂಭದಲ್ಲಿ ಅಮೆರಿಕದ ಆ್ಯಪಲ್ ಕಂಪನಿಯ ಸಹಸ್ಥಾಪಕ ಮತ್ತು ಮಾಜಿ ಸಿಇಒ ಆಗಿದ್ದ ಸ್ಟೀವ್ ಜಾಬ್ಸ್(Steve Jobs) ಅವರ ಪತ್ನಿ, ಜಗತ್ತಿನ ಶ್ರೀಮತ ಮಹಿಳೆಯರ ಪೈಕಿ ಒಬ್ಬರಾದ ಲಾರೀನ್ ಪೋವೆಲ್ ಜಾಬ್ಸ್ (Lauren Powell Jobs) ಭಾಗಿಯಾಗಿ ವ್ರತಾಚರಣೆ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಲಾರೀನ್ ಇದೇ 13ರಂದು ಉತ್ತರಪ್ರದೇಶದ ಪ್ರಯಾಗ್‌ರಾಜ್‌ಗೆ(prayagraj) ಆಗಮಿಸಿ ನಿರಂಜನಿ ಅಖಾಡದ ಮಹಾಮಂಡಲೇಶ್ವರರಾದ ಸ್ವಾಮಿ ಕೈಲಾಸಾನಂದ ಅವರ ನೇತೃತ್ವದ ತಂಡದಲ್ಲಿದ್ದುಕೊಂಡು ಕಲ್ಪವಾಸ್ ವ್ರತ ಕೈಗೊಳ್ಳಲಿದ್ದಾರೆ .

ಕಲ್ಪವಾಸೀಸ್ ಏನು ಮಾಡುತ್ತಾರೆ?
ಮಹಾಭಾರತ ಮತ್ತು ರಾಮಚರಿತಮಾನಸದಲ್ಲಿ ತಿಳಿಸಿರುವಂತೆ, ಈ ಹಿಂದೂ ಸಂಪ್ರದಾಯವು ಸ್ವಯಂ ಶುದ್ಧೀಕರಣ ಮತ್ತು ಗಾಢವಾದ ಆಧ್ಯಾತ್ಮಿಕ ಶಿಸ್ತು ಒಳಗೊಂಡಿರುತ್ತದೆ. ಶರೀರ ಮತ್ತು ಮನಸ್ಸನ್ನು ಶುದ್ಧೀಕರಿಸಿ ಅಧ್ಯಾತ್ಮ ಜ್ಞಾನವನ್ನು ಗಳಿಸಲು ಕೈಗೊಳ್ಳುವ ವ್ರತ ಇದಾಗಿದೆ. ಪುಷ್ಯ ಪೂರ್ಣಿಮೆಯಿಂದ ಆರಂಭವಾಗಿ ಮಾಘ ಪೂರ್ಣಿಮೆಯವರೆಗೆ 1 ತಿಂಗಳ ಕಾಲ ಈ ವ್ರತ ಮಾಡಲಾಗುತ್ತದೆ. ಇದನ್ನು ಕೈಗೊಳ್ಳುವವರನ್ನು ‘ಕಲ್ಪವಾಸೀಸ್’ ಎಂದು ಕರೆಯುತ್ತಾರೆ. ಒಂದು ತಿಂಗಳ ವ್ರತದ ಅವಧಿಯಲ್ಲಿ ಕಲ್ಪವಾಸಿಗಳು ಆತ್ಮಾವಲೋಕನ ಮಾಡಿಕೊಂಡು, ಆಧ್ಯಾತ್ಮಿಕ ಶುದ್ಧಿಯನ್ನು ಮಾಡಿಕೊಳ್ಳುತ್ತಾರೆ. ಇವರು ತಮ್ಮ ಎಲ್ಲ ಲೌಕಿಕ ಭೋಗಗಳನ್ನು ತ್ಯಜಿಸಿ, ಸಂಗಮಕ್ಕೆ ಆಗಮಿಸಿ, ಅದರ ದಡದಲ್ಲೇ ಟೆಂಟ್ ಹಾಕಿಕೊಂಡು ತಂಗುತ್ತಾರೆ. ಪ್ರತಿ ದಿನ ಸಂಗಮಕ್ಕೆ ಬಂದು ಪವಿತ್ರ ಗಂಗೆಯಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಈ ಮೂಲಕ ತಾವು ಬದುಕಿನಲ್ಲಿ ಮಾಡಿದ ಪಾಪಗಳಿಂದ ಮುಕ್ತಿ ಪಡೆಯುತ್ತಾರೆ ಎಂಬುದು ಪ್ರತೀತಿ. ಸ್ನಾನದ ಬಳಿಕ ಕುಂಭಮೇಳಕ್ಕೆ ಆಗಮಿಸಿರುವ ವಿವಿಧ ಸಾಧು, ಸಂತರ ಶಿಬಿರಗಳಿಗೆ ಭೇಟಿ ನೀಡಿ, ದಿನಪೂರ್ತಿ ಅಲ್ಲಿ ನಡೆಯುವ ಭಜನೆ, ಕೀರ್ತನೆಗಳನ್ನು ಆಲಿಸುತ್ತಾ ಭಾವಪರವಶರಾಗುತ್ತಾರೆ.
ಯಾರಿವರು ಲಾರೀನ್ ಪೋವೆಲ್?
1.28 ಲಕ್ಷ ಕೋಟಿ ರೂ. ನಿವ್ವಳ ಸಂಪತ್ತು ಹೊಂದಿರುವ ಲಾರೀನ್ ಪೋವೆಲ್ (Lauren Powell) ಅವರು ಜಗತ್ತಿನ ಅತ್ಯಂತ ಶ್ರೀಮಂತ ಮಹಿಳೆಯರ ಪೈಕಿ ಒಬ್ಬರು. 2011ರಲ್ಲಿ ನಿಧನರಾದ ಪತಿ ಸ್ಟೀವ್ ಜಾಬ್ಸ್ ಅವರು ಆ್ಯಪಲ್ ಕಂಪನಿಯಲ್ಲಿ ಹೊಂದಿದ್ದ ಷೇರುಗಳೂ ಈ ಸಂಪತ್ತಿನಲ್ಲಿ ಸೇರಿವೆ.