ವಿಜಯಪುರ : ವೀರಶೈವ ಲಿಂಗಾಯತ ಗೊಂದಲ ನಿವಾರಣೆಗೆ ಮತದಾನ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ನಿಡುಮಾಮಿಡಿ ಮಠದ ವೀರಭದ್ರ ಚೆನ್ನಮಲ್ಲಿಕಾರ್ಜುನ ಮಹಾಸ್ವಾಮೀಜಿ ಸಲಹೆ ನೀಡಿದ್ದಾರೆ.
ಇಂದು(ಸೋಮವಾರ) ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸ್ವಾಮೀಜಿ, ವೀರಶೈವ ಲಿಂಗಾಯತ ಗೊಂದಲ ನಿನ್ನೆ ಮೊನ್ನೆಯದಲ್ಲ. ಶತಮಾನದಿಂದ ಚರ್ಚಿತವಾಗುತ್ತಾ ಗೊಂದಲದ ವಿಷಯವಾಗಿ ಪುನರಾವರ್ತನೆಯಾಗುತ್ತಲೇ ಇದೆ. ಈಗ 80ರ ದಶಕದಿಂದಲೂ ಮತ್ತೆ ಸಮಸ್ಯೆ ಉದ್ಭವಿಸಿದೆ ಎಂದು ತಿಳಿಸಿದ್ದಾರೆ.
ಇಷ್ಟೊಂದು ದೀರ್ಘಕಾಲಕ್ಕೆ ಇದು ಹೋಗಬಾರದಿತ್ತು. ವೀರಶೈವ ಹಾಗೂ ಲಿಂಗಾಯತ ವ್ಯಾಪ್ತಿಯಲ್ಲಿ ಬರುವ ಬಹುತೇಕರು ಒಂದಾಗಿ ಹೋಗಬೇಕು ಎಂದು ಬಯಸುತ್ತಾರೆ. ನಗರವಾಸಿಗಳು, ವಿದ್ಯಾವಂತರು ಪ್ರತ್ಯೇಕವಾಗಿ ಹೋಗಬೇಕು ಎಂದು ಹೇಳುತ್ತಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದ ಜಾತಿ ಜನಗಣತಿ ಆರಂಭವಾಗುವ ವೇಳೆಗಾದರೂ ಜೀವಂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡಬೇಕಿದೆ ಎಂದಿದ್ದಾರೆ.
ವೀರಶೈವ ಹಾಗೂ ಲಿಂಗಾಯತ ಗುರು ವರ್ಗ, ವಿರಕ್ತ ಮಠಾಧೀಶರು, ಧಾರ್ಮಿಕ ವಿದ್ವಾಂಸರು, ಚಿಂತಕರು, ಜನಪ್ರತಿನಿಧಿಗ ಳ, ಮಾಜಿ ಶಾಸಕರ ಹಾಗೂ ಸಮಾಜಗಳ ಖ್ಯಾತನಾಮರ ಸಭೆ ನಡೆಸಿ ಮತದಾನ ಏರ್ಪಡಿಸಿ ಅಭಿಪ್ರಾಯ ಸಂಗ್ರಹಿಸ ಬೇಕು. ಇದರಲ್ಲಿ ಮೂರನೇ ಎರಡರಷ್ಟು ಬರುವ ಅಭಿಪ್ರಾಯಕ್ಕೆ ಮನ್ನಣೆ ಕೊಡಬೇಕು ಎಂದು ಸಲಹೆ ನೀಡಿದ್ದಾರೆ.