ಮೈಸೂರು : ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರು -ಕೊಡಗು ಕ್ಷೇತ್ರದಲ್ಲಿ ಮತ ಕಳವು ಮಾಡಲಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿಯೂ ಆಗಿದ್ದ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದಾರೆ.
ಇಂದು (ಬುಧವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮಣ್, ಆ.08ರಂದು ಬೆಂಗಳೂರಿನಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡೆಸುವ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ, ನಂತರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, 23 ಲಕ್ಷ ಮತದಾರರಿದ್ದಾರೆ. ಜಾಮರಾಜ, ಕೃಷ್ಣರಾಜ, ಮಡಿಕೇರಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ 1,100 ಮತಗಟ್ಟೆಗಳಿದ್ದು, ಅವುಗಳಲ್ಲಿ 292 ಮತಗಟ್ಟೆಗಳ ಪರಿಶೀಲನೆ ಮಾಡಲಾಗಿದೆ. ಇಲ್ಲಿ ಇವಿಎಂಗಳನ್ನು ರಿಗ್ಗಿಂಗ್ ಮಾಡಿರುವ ಬಗ್ಗೆ ದಾಖಲೆಗಳನ್ನು ತಯಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಈ ನಾಲ್ಕೂ ಲೋಕಸಭಾ ಕ್ಷೇತ್ರಗಳಲ್ಲಿ 1,45,616 ಮತ ಚಲಾವಣೆಯಾಗಿದ್ದು, ಕಾಂಗ್ರೆಸ್ ಗೆ 27,522 ಹಾಗೂ ಬಿಜೆಪಿಗೆ 1,18,094 ಬಂದಿವೆ. 2018, 2023 ವಿಧಾನಸಭಾ ಚುನಾವಣೆ ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಶೇ. 40ಕ್ಕಿಂತ ಕಡಿಮೆ ಮತಗಳು ಬಂದಿಲ್ಲ. ಆದರೇ, 2024ರ ಚುನಾವಣೆಯಲ್ಲಿ ಶೇ.10ಕ್ಕಿಂತಲೂ ಕಡಿಮೆ ಮತ ಸಿಕ್ಕಿರುವುದು ಮತಗಳವು ಆಗಿದೆ ಎನ್ನುವುದಕ್ಕೆ ಪ್ರಮುಖ ಸಾಕ್ಷಿಗಳಾಗಿವೆ ಎಂದು ಆರೋಪಿಸಿದ್ದಾರೆ.
ಗ್ರಾಮವೊಂದರ ಬೂತ್ ನಲ್ಲಿ 750 ಮತ ಚಲಾವಣೆಯಾಗಿದ್ದು. 15 ಮನೆ ಕಾಂಗ್ರೆಸ್ ಕಾರ್ಯಕರ್ತರಾಗಿದ್ದೇವೆ. ಕಡಿಮೆ ಎಂದರೂ 50 ಮತಗಳು ಬರಬೇಕು. ಆದರೆ ಬಂದಿದ್ದು 7 ಮತಗಳಷ್ಟೇ. ನರಸಿಂಹರಾಜ ಕ್ಷೇತ್ರದ ಶಾಂತಿನಗರದಲ್ಲಿ ಒಂದೇ ಸಮುದಾಯ ಮಾತ್ರವೇ ಇದೆ. 700 ಮತಗಳಲ್ಲಿ 500 ಕಾಂಗ್ರೆಸ್ ಗೆ ಬಂದಿದ್ದು, ಬಿಜೆಪಿಗೆ 200 ಮತಗಳು ಹೋಗಿವೆ. ಒಂದು ಮತ ಸಿಗುವ ಅವಕಾಶ ಬಿಜೆಪಿಗೆ ಇಲ್ಲ. ಅಲ್ಲದೇ, ಒಂದು ಕಡೆ ಮತದಾರರೇ 700 ಮಂದಿ ಇದ್ದರೂ, 750 ಮತಗಳು ಚಲಾವಣೆಯಾಗಿವೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.


















