ಬೆಂಗಳೂರು: ಷೇರು ಮಾರುಕಟ್ಟೆಯು ಸತತವಾಗಿ ಕುಸಿತ ಕಾಣುತ್ತಿದೆ. ಮ್ಯೂಚುವಲ್ ಫಂಡ್ ಎಸ್ಐಪಿಗಳು ಕೂಡ ಲಾಭ ತಂದುಕೊಡುತ್ತಿಲ್ಲ. ಮೇಲಾಗಿ, ಎಲ್ಲರಿಗೂ ಈ ಹೂಡಿಕೆಗಳು ಅರ್ಥವಾಗುವುದಿಲ್ಲ. ಇನ್ನೂ ಹೆಚ್ಚಿನ ಜನರಿಗೆ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಇಂತಹವರಿಗೆಂದೇ ಕೇಂದ್ರ ಸರ್ಕಾರದ ಬೆಂಬಲ ಇರುವ ವಿಪಿಎಫ್ (VPF) ಅರ್ಥಾತ್ ವಾಲೆಂಟರಿ ಪ್ರಾವಿಂಡೆಂಟ್ ಫಂಡ್ ಇದೆ. ರಿಸ್ಕ್ ಇಲ್ಲದೆ, ನಿಯಮಿತವಾಗಿ ಹೂಡಿಕೆ ಮಾಡಿ, ಹೆಚ್ಚಿನ ರಿಟರ್ನ್ಸ್ ಪಡೆಯಬಹುದಾಗಿದೆ.
ವಿಪಿಎಫ್ ಎಂದರೇನು?
ಕೇಂದ್ರ ಕಾರ್ಮಿಕ ಸಚಿವಾಲಯದ ಅಧೀನದಲ್ಲಿರುವ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಬಗ್ಗೆ ಎಲ್ಲರಿಗೂ ಗೊತ್ತಿದೆ. ಈ ಇಪಿಎಫ್ ನ ಮುಂದುವರಿದ ಅಥವಾ ಪರ್ಯಾಯ ಹೂಡಿಕೆಯ ಮಾದರಿಯೇ ವಿಪಿಎಫ್ ಅಥವಾ ಸ್ವಯಂ ಪ್ರೇರಿತ ನಿಧಿಯಾಗಿದೆ. ಇಪಿಎಫ್ ನಲ್ಲಿ ಉದ್ಯೋಗಿ ಹಾಗೂ ಉದ್ಯೋಗದಾತರ ಪಾಲು ಇರುತ್ತದೆ. ಆದರೆ, ವಿಪಿಎಫ್ ನಲ್ಲಿ ಸ್ವಯಂಪ್ರೇರಿತರಾಗಿ ನಾವೇ ಹೂಡಿಕೆ ಮಾಡಬೇಕು.
ಯಾರೆಲ್ಲ ಹೂಡಿಕೆ ಮಾಡಬಹುದು?
ಯಾವುದೇ ಕಂಪನಿಯಲ್ಲಿ ಕೆಲಸ ಮಾಡುವವರು ವಿಪಿಎಫ್ ನಲ್ಲಿ ಹೂಡಿಕೆ ಮಾಡಬಹುದು. ಇಪಿಎಫ್ ಸದಸ್ಯರಾದವರು ಮಾತ್ರ ವಿಪಿಎಫ್ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ನಿಮ್ಮ ವೇತನದ ಬೇಸಿಕ್ ಸ್ಯಾಲರಿ ಹಾಗೂ ತುಟ್ಟಿ ಭತ್ಯೆಯ ಶೇ.100ರಷ್ಟು ಮೊತ್ತವನ್ನು ಕೂಡ ಹೂಡಿಕೆ ಮಾಡಬಹುದಾಗಿದೆ. ವರ್ಷಕ್ಕೆ ಎರಡೂವರೆ ಲಕ್ಷ ರೂ.ವರೆಗೆ ವಿಪಿಎಫ್ ನಲ್ಲಿ ಹೂಡಿಕೆ ಮಾಡುವುದು ಸೂಕ್ತವಾಗಿದ್ದು, ಶೇ.8.15ರಷ್ಟು ಬಡ್ಡಿದರದ ಲಾಭ ಸಿಗುತ್ತದೆ.
ಹೂಡಿಕೆ ಮಾಡುವುದು ಹೇಗೆ?
ನಿಮ್ಮ ಕಂಪನಿಯ ಮಾನವ ಸಂಪನ್ಮೂಲ (ಎಚ್ ಆರ್_) ವಿಭಾಗದ ಅಧಿಕಾರಿಯನ್ನು ಭೇಟಿ ಮಾಡುವ ಮೂಲಕ ಹೂಡಿಕೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಎಚ್ ಆರ್ ವಿಪಿಎಫ್ ನೋಂದಣಿ ಫಾರಂ ಪಡೆದುಕೊಂಡು, ಅದನ್ನು ಭರ್ತಿ ಮಾಡಿ, ತಿಂಗಳಿಗೆ ಇಂತಿಷ್ಟು ಹಣ ವೇತನದಲ್ಲಿ ಕಟ್ ಆಗುವಂತೆ ನಮೂದಿಸಿದರೆ ಹೂಡಿಕೆ ಸುಲಭವಾಗುತ್ತದೆ. ಅಂದಹಾಗೆ, ವಿಪಿಎಫ್ ಮೇಲಿನ ಬಡ್ಡಿ ಗಳಿಕೆಯು ಸಂಪೂರ್ಣವಾಗಿ ತೆರಿಗೆ ವಿನಾಯಿತಿ ಇರುವುದರಿಂದ ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ. ನಿವೃತ್ತಿ ಯೋಜನೆ, ದೀರ್ಘಕಾಲೀನ ಹೂಡಿಕೆಯ ಯೋಜನೆ ಇರುವವರು ಇದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.