ಬೆಂಗಳೂರು: ವಿವೊ ಇಂಡಿಯಾ ಮೊಬೈಲ್ ಕಂಪನಿಯು ವಿದ್ಯಾರ್ಥಿನಿಯರಿಗೆ ಸ್ಕಾಲರ್ ಶಿಪ್ ಘೋಷಣೆ ಮಾಡಿದೆ. ವಿವೊ ಕನ್ಯಾಜ್ಞಾನ್ ಸ್ಕಾಲರ್ ಶಿಪ್‘ (vivo KanyaGyaan Scholarship Program 2025-26) ಯೋಜನೆ ಅಡಿಯಲ್ಲಿ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಸ್ಕಾಲರ್ ಶಿಪ್ ನೀಡಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರು ಅರ್ಜಿಗಳನ್ನು ಸಲ್ಲಿಸುವ ಮೂಲಕ ವಿದ್ಯಾರ್ಥಿವೇತನ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬಹುದು.
ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ವಾರ್ಷಿಕವಾಗಿ 60 ಸಾವಿರ ರೂಪಾಯಿ ಆರ್ಥಿಕ ನೆರವು ಸಿಗಲಿದೆ. ಇದು ಕೋರ್ಸ್ ಮುಗಿಯುವವರೆಗೆ (ಗರಿಷ್ಠ 3 ವರ್ಷ) ಮುಂದುವರಿಯಬಹುದು. ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನವಾಗಿದೆ. ಹಾಗಾಗಿ, ಅಭ್ಯರ್ಥಿಗಳು ಇಂದೇ ಅರ್ಜಿ ಸಲ್ಲಿಸುವುದು ಒಳಿತು. ವಿವೊ ಇಂಡಿಯಾ ಕಂಪನಿಯ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸುವಂತಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಹತೆಗಳು ಏನೇನು?
ವಿದ್ಯಾರ್ಥಿನಿಯರಿಗೆ ಮಾತ್ರ ಮೀಸಲಾದ ವಿದ್ಯಾರ್ಥಿ ವೇತನವಾಗಿದೆ.
ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಅಥವಾ ಗಣಿತ (STEM) ವಿಷಯಗಳಲ್ಲಿ ಪದವಿ (B.E/B.Tech, MBBS, B.Sc, BCA) ಅಧ್ಯಯನ ಮಾಡುತ್ತಿರುವ ಪ್ರಥಮ ಅಥವಾ ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.
ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಹಾಗೂ ಹಿಂದಿನ ಸೆಮಿಸ್ಟರ್ ನಲ್ಲಿ ಕನಿಷ್ಠ 70% ಅಂಕ ಪಡೆದಿರಬೇಕು.
ವಿದ್ಯಾರ್ಥಿನಿಯ ಕುಟುಂಬದ ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಕಡಿಮೆ ಇರಬೇಕು.
ಸರ್ಕಾರಿ ಕಾಲೇಜುಗಳಲ್ಲಿ ಅಥವಾ NIRF ಶ್ರೇಯಾಂಕಿತ ಸಂಸ್ಥೆಗಳಲ್ಲಿ ಓದುತ್ತಿರುವವರಿಗೆ ಆದ್ಯತೆ.
ಯಾವ ದಾಖಲೆ ಬೇಕು?
ಅರ್ಜಿ ಸಲ್ಲಿಸುವವರು ಹಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿ, ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ, ಕುಟುಂಬದ ಆದಾಯ ಪ್ರಮಾಣ ಪತ್ರ, ಪ್ರಸಕ್ತ ಸಾಲಿನ ಕಾಲೇಜು ಪ್ರವೇಶ ದಾಖಲೆ (ಐಡಿ ಕಾರ್ಡ್ ಅಥವಾ ಫೀಸ್ ರಶೀದಿ), ಬ್ಯಾಂಕ್ ಪಾಸ್ ಬುಕ್ ಪ್ರತಿ. ಅರ್ಜಿ ಸಲ್ಲಿಸಲು ಬಯಸುವವರು https://www.buddy4study.com/page/vivo-kanya-gyaan-scholarship-program ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.



















