ಬೀದರ್: ದಿವಂಗತ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸ್ಮಾರಕವನ್ನು ತೆರವು ಮಾಡುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಬಾಲಕೃಷ್ಣ ಕುಟುಂಬಕ್ಕೆ ರಾಜ್ಯ ಸರ್ಕಾರ ಅಚ್ಚರಿ ಮೂಡಿಸಿದ್ದು, ಅಭಿಮಾನ್ ಸ್ಟುಡಿಯೋಗಾಗಿ ನೀಡಿದ್ದ ಜಾಗವನ್ನು ಅರಣ್ಯ ಭೂಮಿ ಎಂದು ಘೋಷಣೆ ಮಾಡಿ ಆದೇಶಿಸಿದೆ.
ಈ ಸಂಬಂಧಿಸಿದಂತೆ ವರದಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಅಭಿಮಾನ್ ಸ್ಟುಡಿಯೋ ಮಂಜೂರು ಮಾಡುವಾಗ ಸ್ಟುಡಿಯೋ ಹೊರತಾಗಿ ಅನ್ಯ ಉದ್ದೇಶಕ್ಕೆ ಜಮೀನು ಬಳಕೆ ಮಾಡದಂತೆ ಷರತ್ತು ವಿಧಿಸಲಾಗಿತ್ತು. ಇಲ್ಲಿ 10 ಎಕರೆ ಅರಣ್ಯ ಭೂಮಿಯಿದ್ದು ಇದನ್ನು ಮರಳಿ ಪಡೆಯಲು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಭೂ ಪರಿವರ್ತನೆ ಆಗದ ಅರಣ್ಯ ಭೂಮಿಯನ್ನು ಮರಳಿ ಸರ್ಕಾರಕ್ಕೆ ಪಡೆಯುವ ತಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ಎಚ್.ಎಂ.ಟಿ. ವಶದಲ್ಲಿರುವುದು ಅರಣ್ಯ ಭೂಮಿ ಎಂದು ತಮಗೆ ತಿಳಿದ ಕೂಡಲೇ ಕಾನೂನು ಹೋರಾಟಕ್ಕೆ ಮುಂದಾಗಿದ್ದೇನೆ. ಅದೇ ರೀತಿ ಯಾವುದು ಅರಣ್ಯ ಭೂಮಿಯೋ ಅದು ಅರಣ್ಯವಾಗಿ ಉಳಿಯಲಿದೆ ಎಂದು ಹೇಳಿದ್ದಾರೆ.
ಮೇರುನಟ ದಿವಂಗತ ವಿಷ್ಣುವರ್ಧನ್ ಅವರ ಬಗ್ಗೆ ಅಪಾರ ಗೌರವ ಇದೆ. ವಿಷ್ಣುವರ್ಧನ್ ಸ್ಮಾರಕಕ್ಕೆ ಭೂಮಿ ನೀಡುವ ಬಗ್ಗೆ ಮುಖ್ಯಮಂತ್ರಿಯವರು ನಿರ್ಧಾರ ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ.



















