ವಡೋದರಾ : ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಶಿಸ್ತು ಮತ್ತು ಏಕಾಗ್ರತೆಯ ಬಗ್ಗೆ ಜಗತ್ತೇ ಮಾತನಾಡುತ್ತದೆ. ಆದರೆ, ಮೈದಾನಕ್ಕೆ ಬ್ಯಾಟಿಂಗ್ ಮಾಡಲು ಇಳಿಯುವ ಕೆಲವೇ ಕ್ಷಣಗಳ ಮೊದಲು ಕೊಹ್ಲಿ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಾರೆ ಎಂಬುದು ಈಗ ಬಹಿರಂಗವಾಗಿದೆ. ವಡೋದರಾದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಅಭಿಮಾನಿಯೊಬ್ಬರು ಚಿತ್ರೀಕರಿಸಿದ ವಿಡಿಯೋದಲ್ಲಿ ಕೊಹ್ಲಿ ಅವರ ವಿಚಿತ್ರ ‘ಪ್ರಿ-ಬ್ಯಾಟ್ ರಿಚುಯಲ್’ ಬಯಲಾಗಿದೆ.
ಪರ್ಫ್ಯೂಮ್ ಮತ್ತು ಲೋಷನ್: ಕೊಹ್ಲಿ ವಿಭಿನ್ನ ಶೈಲಿ
ರೋಹಿತ್ ಶರ್ಮಾ ಔಟ್ ಆದ ತಕ್ಷಣ ಮೈದಾನಕ್ಕಿಳಿಯಲು ಸಿದ್ಧರಾಗುವ ಕೊಹ್ಲಿ, ಕೇವಲ ಕೆಲವೇ ಸೆಕೆಂಡುಗಳಲ್ಲಿ ಹಲವು ಕೆಲಸಗಳನ್ನು ಮಾಡುತ್ತಾರೆ. ವೈರಲ್ ವಿಡಿಯೋದಲ್ಲಿ ಕೊಹ್ಲಿ ಪ್ಯಾಡ್‌ಗಳನ್ನು ಧರಿಸಿದ ನಂತರ, ಮೈಗೆ ಪರ್ಫ್ಯೂಮ್ ಸಿಂಪಡಿಸಿಕೊಳ್ಳುವುದು, ಕೈಗಳಿಗೆ ಲೋಷನ್ ಹಚ್ಚುವುದು ಮತ್ತು ತುರ್ತಾಗಿ ಏನನ್ನೋ ತಿಂದು ಶಕ್ತಿ ಪಡೆದುಕೊಳ್ಳುವುದು ಕಂಡುಬಂದಿದೆ. ನಂತರ ತಕ್ಷಣವೇ ಗ್ಲೌಸ್‌ಗಳನ್ನು ಧರಿಸಿ ಬ್ಯಾಟ್ ಹಿಡಿದು ಮೈದಾನದತ್ತ ಹೆಜ್ಜೆ ಹಾಕುತ್ತಾರೆ. ಅವರ ಈ ವೇಗದ ಸಿದ್ಧತೆ ಮತ್ತು ಏಕಾಗ್ರತೆ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ಶತಕ ವಂಚಿತರಾದರೂ ಇತಿಹಾಸ ನಿರ್ಮಿಸಿದ ಕೊಹ್ಲಿ
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎಂದಿನಂತೆ ಅದ್ಭುತ ಪ್ರದರ್ಶನ ನೀಡಿದರು. ನ್ಯೂಜಿಲೆಂಡ್ ನೀಡಿದ್ದ 301 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟುವಾಗ ಜವಾಬ್ದಾರಿಯುತ ಆಟವಾಡಿದ ಕೊಹ್ಲಿ, ಕೇವಲ 7 ರನ್‌ಗಳಿಂದ ಶತಕ ವಂಚಿತರಾದರು. 91 ಎಸೆತಗಳಲ್ಲಿ 93 ರನ್ ಗಳಿಸಿದ್ದಾಗ ಅವರು ಕ್ಯಾಚ್ ನೀಡಿ ಔಟ್ ಆದರು. ಆದರೂ, ಅವರ ಈ ಅಮೋಘ ಇನಿಂಗ್ಸ್ ನೆರವಿನಿಂದ ಭಾರತ 4 ವಿಕೆಟ್‌ಗಳ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.
ಸಚಿನ್ ದಾಖಲೆಗೆ ಮತ್ತಷ್ಟು ಹತ್ತಿರ: 28,000 ರನ್ ಪೂರೈಸಿದ ಕೊಹ್ಲಿ
ಇದೇ ಇನಿಂಗ್ಸ್ ವೇಳೆ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದರು. ಅತಿ ವೇಗವಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 28,000 ರನ್ ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೀಗ ಅವರು ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದು, ಸಚಿನ್ ತೆಂಡೂಲ್ಕರ್ ನಂತರದ ಸ್ಥಾನದಲ್ಲಿದ್ದಾರೆ. ಸದ್ಯ ಕೊಹ್ಲಿ ಒಟ್ಟು 28,068 ರನ್ ಗಳಿಸಿದ್ದು, ಸಚಿನ್ ಅವರ 34,357 ರನ್‌ಗಳ ವಿಶ್ವದಾಖಲೆಯನ್ನು ಮುರಿಯಲು ಇನ್ನೂ 6,289 ರನ್‌ಗಳ ಅವಶ್ಯಕತೆ ಇದೆ. ಕೊಹ್ಲಿ ಈಗಾಗಲೇ ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವುದರಿಂದ, ಈ ದಾಖಲೆ ಮುರಿಯುವುದು ಅವರಿಗೆ ದೊಡ್ಡ ಸವಾಲಾಗಲಿದೆ.
ಇದನ್ನೂ ಓದಿ : ಬಿಬಿಎಲ್ ಮೈದಾನದಲ್ಲಿ ‘ಜೋಕರ್’ ಆದ ಹಸನ್ ಅಲಿ | ಪಾಕಿಸ್ತಾನಿ ಆಟಗಾರನ ಯಡವಟ್ಟಿಗೆ ಅಡಿಲೇಡ್ ಸ್ಟ್ರೈಕರ್ಸ್ ಕಂಗಾಲು!



















