ಮುಂಬೈ : ಭಾರತ ಮಹಿಳಾ ತಂಡದ ಐದು ದಶಕಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ 52 ರನ್ಗಳ ಜಯಭೇರಿ ಬಾರಿಸಿ ಟೀಂ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕಿ ಲಾರಾ ವೋಲ್ವಾರ್ಡ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ಪರ ಶಫಾಲಿ ವರ್ಮಾ 87 ರನ್ ಬಾರಿಸಿದರೆ, ಸ್ಮೃತಿ ಮಂಧಾನ 45 ರನ್ ಸಿಡಿಸಿದರು. ಇನ್ನು ದೀಪ್ತಿ ಶರ್ಮಾ 58 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಭಾರತ ತಂಡವು 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 298 ರನ್ ಕಲೆಹಾಕಿತು.
299 ರನ್ಗಳ ಕಠಿಣ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ಪರ ಲಾರಾ ವೋಲ್ವಾರ್ಡ್ 101 ರನ್ ಬಾರಿಸಿದರೂ, ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಸಾಥ್ ಸಿಕ್ಕಿರಲಿಲ್ಲ. ಪರಿಣಾಮ ಸೌತ್ ಆಫ್ರಿಕಾ ಪಡೆ 45.3 ಓವರ್ಗಳಲ್ಲಿ 246 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಭಾರತ ತಂಡವು ಚೊಚ್ಚಲ ಬಾರಿ ಏಕದಿನ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಈ ಗೆಲುವಿನ ಬೆನ್ನಲ್ಲೇ ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾ ಮೂಲಕ ಭಾರತ ವನಿತಾ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಮುಂದಿನ ಪೀಳಿಗೆಗೆ ಸ್ಫೂರ್ತಿ, ನಿಮ್ಮ ನಿರ್ಭೀತ ಕ್ರಿಕೆಟ್ ಮತ್ತು ನಂಬಿಕೆಯಿಂದ ನೀವು ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ನೀವು ಎಲ್ಲಾ ಪ್ರಶಂಸೆಗಳಿಗೆ ಅರ್ಹರು ಮತ್ತು ಈ ಕ್ಷಣವನ್ನು ಪೂರ್ಣವಾಗಿ ಆನಂದಿಸಿ. ಹರ್ಮನ್ ಮತ್ತು ತಂಡಕ್ಕೆ ಅಭಿನಂದನೆಗಳು. ಜೈ ಹಿಂದ್ ಎಂದು ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದಿಸಿದ್ದಾರೆ.
ಸ್ಟೇಡಿಯಂನಲ್ಲಿದ್ದ ರೋಹಿತ್ ಶರ್ಮಾ :
ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ವೇಳೆ ಭಾರತ ತಂಡದ ಮತ್ತೋರ್ವ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದರು. ಪತ್ನಿ ಜೊತೆ ಸ್ಟೇಡಿಯಂ ಗ್ಯಾಲರಿಯಲ್ಲಿದ್ದ ಹಿಟ್ಮ್ಯಾನ್ ಮ್ಯಾಚ್ ಮುಗಿದ ಬಳಿಕ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿ ತೆರಳಿದ್ದರು. ಈ ಮೂಲಕ ಭಾರತ ಮಹಿಳಾ ತಂಡದ ಐತಿಹಾಸಿಕ ಕ್ಷಣಗಳಿಗೆ ರೋಹಿತ್ ಶರ್ಮಾ ಸಾಕ್ಷಿಯಾಗಿದ್ದರು.
ಇದನ್ನೂ ಓದಿ : ಜಯ್ ಶಾ ಪಾದ ಮುಟ್ಟಲು ಯತ್ನಿಸಿದ ಹರ್ಮನ್‌ಪ್ರೀತ್, ತಡೆದ ಐಸಿಸಿ ಅಧ್ಯಕ್ಷ!



















