ನವದೆಹಲಿ: ವಿರಾಟ್ ಕೊಹ್ಲಿ ಅವರು ಪ್ರಸ್ತುತ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸುತ್ತಿರುವುದು ಅಭಿಮಾನಿಗಳ ಪಾಲಿಗೆ ಬೇಸರದ ವಿಷಯ. ಅವರ ಬ್ಯಾಟ್ನಿಂದ ರನ್ ಹರಿಯದಿರುವುದರಿಂದ ಅವರನ್ನು ಹೊಗಳುತ್ತಿದ್ದವರೆಲ್ಲರೂ ಟೀಕೆ ಮಾಡಲು ಶುರು ಮಾಡಿದ್ದಾರೆ. ಆದರೆ ಕ್ರಿಸ್ ಗೇಲ್ ಪ್ರಕಾರ ಕೊಹ್ಲಿ ವಿಶ್ವಶ್ರೇಷ್ಠ ಆಟಗಾರರಾಗಿಯೇ ಮುಂದುವರಿದಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ.
ಕಟಕ್‌ನಲ್ಲಿ ಈಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ವಿರಾಟ್ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಕಳೆದ ಕೆಲವು ತಿಂಗಳುಗಳಿಂದ ಅವರು ಎಲ್ಲ ಮಾದರಿಗಳಲ್ಲಿಯೂ ವಿಫಲರಾಗುತ್ತಿದ್ದಾರೆ. ಟಿ20 ಕ್ರಿಕೆಟ್ಗೆ ವಿದಾಯ ಹೇಳಿರುವ ಅವರು ಏಕದಿನ ಹಾಗೂ ಟೆಸ್ಟ್ ಮಾದರಿಯನ್ನು ಉಳಿಸಿಕೊಂಡಿದ್ದಾರೆ. ಆದರೆ, ಅದರಿಂದ ಅವರಿಗೆ ಹೆಸರು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.
‘ಕೊಹ್ಲಿ ಅವರು ಫಾರ್ಮ್‌ನಲ್ಲಿ ಇರಲಿ, ಬಿಡಲಿ ಜಗತ್ತಿನ ಶ್ರೇಷ್ಠ ಕ್ರಿಕೆಟಿಗ ಅವರೇ. ಅವರು ಇದುವರೆಗೆ ಎಲ್ಲ ಮಾದರಿಗಳಲ್ಲಿ ಗಳಿಸಿದ ಶತಕಗಳು, ರನ್‌ಗಳು ಅವರನ್ನು ಸಾರ್ವಕಾಲಿಕ ಶ್ರೇಷ್ಠ ಆಟಗಾರನನ್ನಾಗಿ ರೂಪಿಸಿವೆ’ ಎಂದು ಗೇಲ್ ಅವರು ಮಂಗಳವಾರ ಇಲ್ಲಿ ನಡೆದ ಸಮಾರಂಭದಲ್ಲಿ ಹೇಳಿದರು.
‘ನಾವು ಕ್ರಿಕೆಟಿಗರೆಲ್ಲರೂ ಇಂತಹ ಕೆಟ್ಟ ಗಳಿಗೆಯನ್ನು ಎದುರಿಸಿರುತ್ತೇವೆ. ಕೊಹ್ಲಿ ಕೂಡ ಅದೇ ರೀತಿಯ ಸವಾಲನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಅವರ ಬ್ಯಾಟ್ನಿಂದ ರನ್ ಮೂಡಿ ಬರುತ್ತಿಲ್ಲ. ಅವರ ವೃತ್ತಿಜೀವನದ ಅಂತಿಮ ಹಂತದ ವರ್ಷಗಳಿವು. ಇಂತಹ ಸಂದರ್ಭದಲ್ಲಿ ಅವರು ಈ ಸವಾಲು ಎದುರಿಸುತ್ತಿದ್ದಾರೆ. ಅವರು ಎದೆಗುಂದದೇ ತಮ್ಮ ಸಾಮರ್ಥ್ಯವನ್ನು ತೋರಿಸಲು ಸಿದ್ಧರಾಗಬೇಕು ಅಷ್ಟೇ’ ಎಂದು ಗೇಲ್ ಅಭಿಪ್ರಾಯಪಟ್ಟಿದ್ದಾರೆ.
‘ರೋಹಿತ್ ಶರ್ಮಾ ಅವರು ಊರಿನ ಹೊಸ ರಾಜ. ನನ್ನ ಸಿಕ್ಸರ್ ದಾಖಲೆಯನ್ನು ಮುರಿದಿರುವ ಅವರಿಗೆ ಅಭಿನಂದನೆಗಳು. ಅವರು ಇನ್ನಷ್ಟು, ಮಗದಷ್ಟು ಸಿಕ್ಸರ್‌ಗಳನ್ನು ಹೊಡೆಯುವುದು ಖಚಿತ’ ಎಂದು ಗೇಲ್ ವಿಶ್ವಾಸ ವ್ಯಕ್ತಪಡಿಸಿದರು.